ಮಹಾರಾಷ್ಟ್ರ ಕಾಂಗ್ರೆಸ್​ ನಾಯಕ ಪಕ್ಷದಿಂದಲೇ ವಜಾ; ಸಚಿನ್​ ಪೈಲಟ್​ ಬಗ್ಗೆ ಒಂದು ಟ್ವೀಟ್​ ಮಾಡಿದ್ದಕ್ಕೆ ಸಸ್ಪೆಂಡ್​ !

Sanjay Jha 1
Published on

ಮುಂಬೈ: ಸಚಿನ್​ ಪೈಲಟ್​ ಅವರನ್ನು ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ ಮತ್ತು ಡಿಸಿಎಂ ಹುದ್ದೆಯಿಂದ ವಜಾಗೊಳಿಸಿರುವ ಕಾಂಗ್ರೆಸ್​, ಅವರಿಗೆ ಬೆಂಬಲ ನೀಡಿದ್ದ ಇಬ್ಬರು ಸಚಿವರನ್ನೂ ಹುದ್ದೆಯಿಂದ ಕಿತ್ತುಹಾಕಿದೆ. ಇದೀಗ ಸಚಿನ್​ ಪೈಲಟ್ ಪರವಾಗಿ ಟ್ವೀಟ್​ ಮಾಡಿದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್​ ಝಾ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ.

ಮಹಾರಾಷ್ಟ್ರ ಕಾಂಗ್ರೆಸ್​ ಟ್ವೀಟ್​ ಮಾಡಿದ್ದು, ಸಂಜಯ್ ಜಾ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗುತ್ತಿದೆ ಎಂದು ಹೇಳಿದೆ.

ಸಂಜಯ್​ ಜಾ ಅವರನ್ನು ಇತ್ತೀಚೆಗಷ್ಟೇ ಪಕ್ಷದ ವಕ್ತಾರನ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಪಕ್ಷದ ರಾಷ್ಟ್ರೀಯ ವಕ್ತಾರನ ಸ್ಥಾನ ಕಳೆದುಕೊಂಡ ನಂತರ ಜಾ ಅವರು ತಮ್ಮ ಟ್ವಿಟರ್​ ಬಯೋನಲ್ಲಿ, ನಾನು ನನ್ನ ರಕ್ತದಿಂದ ಕಾಂಗ್ರೆಸ್​ನವರು. ಆದರೆ, ಭಾರತಕ್ಕೆ ಪುನರುಜ್ಜೀವನಗೊಂಡ, ಎರಡನೇ ಸ್ವಾತಂತ್ರ್ಯ ಹೋರಾಟ ಗೆಲ್ಲಲು ಸಿದ್ಧವಾಗಿರುವ ಕಾಂಗ್ರೆಸ್​ನ ಅಗತ್ಯವಿದೆ ಎಂದು ನಾನು ಬರೆದ ಕಾರಣಕ್ಕೆ ನನ್ನನ್ನು ರಾಷ್ಟ್ರೀಯ ವಕ್ತಾರನ ಹುದ್ದೆಯಿಂದ ಕೆಳಗೆ ಇಳಿಸಲಾಗಿದೆ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು ಸಚಿನ್​ ಪೈಲಟ್​-ಸಾರಾ ಮದುವೆ; ಅನೇಕರಿಗೆ ಗೊತ್ತಿಲ್ಲದ ಸಂಗತಿ ಇದು..

ಇದೀಗ ಸಚಿನ್​ ಪೈಲಟ್​ ಅವರನ್ನು ಎರಡೂ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಮತ್ತೆ ಟ್ವೀಟ್​ ಮಾಡಿ ಕಾಂಗ್ರೆಸ್​ನ್ನು ವ್ಯಂಗ್ಯ ಮಾಡಿದ್ದರು.  ಸಚಿನ್​ ಪೈಲಟ್​ ಅವರು 2013ರಿಂದ 18ರವರೆಗೆ ಪಕ್ಷದ ಉದ್ಧಾರಕ್ಕಾಗಿ ತಮ್ಮ ಕಣ್ಣೀರು, ರಕ್ತ, ಬೆವರು, ಶ್ರಮ ನೀಡಿದ್ದಾರೆ. ಬರೀ 21 ಸೀಟ್​​ಗಳನ್ನು ಹೊಂದಿ ಕಳಪೆ ಮಟ್ಟಕ್ಕೆ ಇಳಿದಿದ್ದ ಕಾಂಗ್ರೆಸ್​ 100 ಸ್ಥಾನಗಳನ್ನು ಗೆದ್ದಿದ್ದು ಸಚಿನ್​ ಪೈಲಟ್​ ಅವರಿಂದ. ಅದಕ್ಕೆ ಪ್ರತಿಫಲವಾಗಿ ನಾವು ಅವರಿಗೀಗ ಬೋನಸ್​ ಕೊಡುತ್ತಿದ್ದೇವೆ. ನಾವು ತುಂಬ ಪಾರದರ್ಶಕವಾಗಿದ್ದೇವೆ..ಸಚಿನ್​ ಪೈಲಟ್​ ಅವರ ಕೆಲಸಕ್ಕೆ ಯೋಗ್ಯವಾದ ಬಹುಮಾನ ನೀಡಿದ್ದೇವೆ ಎಂದು ತೀರ ವ್ಯಂಗ್ಯವಾಗಿ ಬರೆದಿದ್ದರು.

ಅದಾದ ಕೆಲವೇ ಹೊತ್ತಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಸಂಜಯ್ ಜಾ ಅವರನ್ನು ವಜಾ ಗೊಳಿಸಿ ಆದೇಶ ಹೊರಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net