More

    ಕಾಶ್ಮೀರದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು ಸಚಿನ್​ ಪೈಲಟ್​-ಸಾರಾ ಮದುವೆ; ಅನೇಕರಿಗೆ ಗೊತ್ತಿಲ್ಲದ ಸಂಗತಿ ಇದು..

    ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣವಾಗಿರುವ ಸಚಿನ್ ಪೈಲಟ್ ಮೇಲೆ ಎಲ್ಲರ ಕಣ್ಣೂ ನೆಟ್ಟಿದೆ.  ಕಳೆದ ಎರಡು ದಿನಗಳಿಂದ ಪಕ್ಷದಿಂದ ಪೂರ್ತಿ ಸಂಪರ್ಕ ಕಳೆದುಕೊಂಡು, ಸಭೆಗಳಿಗೆ ಹಾಜರಾಗದೆ ಅಂತರ ಕಾಯ್ದುಕೊಂಡಿರುವ ಸಚಿನ್​ ಪೈಲಟ್​ ಇಂದು ತಮ್ಮ ಡಿಸಿಎಂ ಹಾಗೂ ಪಿಸಿಸಿ ಅಧ್ಯಕ್ಷನ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅದಾದ ಬೆನ್ನಲ್ಲೇ ಎರಡು ಚಿಕ್ಕ, ಚಿಕ್ಕ ಟ್ವೀಟ್​ಗಳನ್ನು ಮಾಡಿ ಸುಮ್ಮನಾಗಿಬಿಟ್ಟಿದ್ದಾರೆ.

    ಈ ಮಧ್ಯೆ ಅವರ ಪತ್ನಿ ಸಾರಾ ಪೈಲಟ್​ ಅವರೂ ಕೂಡ ಸುದ್ದಿಯಾಗಿದ್ದಾರೆ. ಸಾರಾ ಪೈಲಟ್​ ಅವರು ತಮ್ಮ ಪತಿ ಸಚಿನ್​ ಪೈಲಟ್​ರನ್ನು ಕಾಂಗ್ರೆಸ್​ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು.

    ಆದರೆ ವಾಸ್ತವದಲ್ಲಿ ಸಾರಾ ಪೈಲಟ್​ ಯಾವುದೇ ಟ್ವೀಟ್​ ಮಾಡಿಲ್ಲ. ಅವರ ಹೆಸರಲ್ಲಿ ರಚಿಸಲಾದ ನಕಲಿ ಖಾತೆಯಿಂದ ಟ್ವೀಟ್​ ಮಾಡಲಾಗಿತ್ತು ಎಂಬುದು ನಂತರ ಗೊತ್ತಾಗಿದೆ. ಆದರೆ ಅಷ್ಟರಲ್ಲಾಗಲೇ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಸಾರಾ ವಿರುದ್ಧ ಕಿಡಿ ಕಾರಿದ್ದಾರೆ. ಅಶೋಕ್​ ಗೆಹ್ಲೋಟ್​ರನ್ನು ವಿರೋಧಿಸಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಿವಾದದ ಮಧ್ಯೆಯೇ ವಿವಾಹ

    ಸಾರಾ ಪೈಲಟ್​ ಅವರು ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್​ ಅಬ್ದುಲ್ಲಾ ಅವರ ಪುತ್ರಿ. 2004ರಲ್ಲಿ ಸಚಿನ್​ ಪೈಲಟ್​ ಹಾಗೂ ಸಾರಾ ಅಬ್ದುಲ್ಲಾ ಅವರ ವಿವಾಹವಾಗಿದೆ.
    ಆದರೆ ಇವರ ಮದುವೆ ಸುಲಭದಲ್ಲಿ ಆಗಿದ್ದಲ್ಲ. ಧರ್ಮವೇ ಬೇರೆಬೇರೆಯಾಗಿದ್ದ ಇವರಿಬ್ಬರ ವಿವಾಹಕ್ಕೆ ಸಹಜವಾಗಿಯೇ ತೊಡಕು ಉಂಟಾಗಿತ್ತು.

    ಸಾರಾ ಕಾಶ್ಮೀರಿ ಮುಸ್ಲಿಂ..ಹಾಗೇ ಸಚಿನ್ ಪೈಲಟ್​ ರಾಜಸ್ಥಾನದ ಗುಜ್ಜರ್ ಮನೆತನಕ್ಕೆ ಸೇರಿದವರು. ಒಬ್ಬ ಮುಸ್ಲಿಂ ಯುವತಿಗೆ ಹಿಂದು ಹುಡುಗನ ಕೈ ಹಿಡಿಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಹಾಗಂತ ಮುಸ್ಲಿಂ ಯುವಕರು ಬೇರೆ ಧರ್ಮದ ಯುವತಿಯರನ್ನು ವಿವಾಹವಾದ ಅದೆಷ್ಟೋ ಉದಾಹರಣೆಗಳು ಸಿಗುತ್ತವೆ. ಈಗಲೂ ಅದು ನಡೆಯುತ್ತಲೇ ಇದೆ.
    ಇಂಥ ಪರಿಸ್ಥಿತಿಯಲ್ಲೂ ಸಚಿನ್​ ಪೈಲಟ್ ಮತ್ತು ಸಾರಾ ಅಬ್ದುಲ್ಲಾ ವಿವಾಹವಾಗಲು ಗಟ್ಟಿ ನಿರ್ಧಾರ ಮಾಡಿದ್ದರು. ಕಾರಣ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು.

    2004ರಲ್ಲಿ ನಡೆದ ಸಾರಾಳ ಮದುವೆಗೆ ಅವರ ತಂದೆ ಫಾರೂಕ್​ ಅಬ್ದುಲ್ಲಾ, ಸಹೋದ ಒಮರ್​ ಅಬ್ದುಲ್ಲಾ ಸೇರಿ ಬಂಧುಗಳ್ಯಾರೂ ಬರಲಿಲ್ಲ. ಅವರೆಲ್ಲ ಈ ಅಂತರ್​ ಧರ್ಮೀಯ ವಿವಾಹವನ್ನು ಬಹಿಷ್ಕರಿಸಿದ್ದರು. ಮತ್ತೊಂದು ವಿಚಿತ್ರವೆಂದರೆ, ಸಾರಾಳ ಸಹೋದರ ಒಮರ್​ ಅಬ್ದುಲ್ಲಾ ಸ್ವತಃ ಸಿಖ್​ ಹುಡುಗಿಯನ್ನು ವಿವಾಹವಾದರು. ಆದರೂ ತನ್ನ ತಂಗಿ ಸಾರಾ ಹಿಂದು ಯುವಕನ ಕೈ ಹಿಡಿದಿದ್ದನ್ನು ಅವರು ಒಪ್ಪಲಿಲ್ಲ.

    ಸಚಿನ್​ ಪೈಲಟ್​ ಹಾಗೂ ಸಾರಾ ಅವರು ಭೇಟಿಯಾಗಿದ್ದು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ. ಅಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಇವರಿಬ್ಬರೂ ಡೇಟಿಂಗ್​ ಮಾಡುತ್ತಿದ್ದರು. ಪ್ರೀತಿಸಿದ ಬಳಿಕ ವಿವಾಹವಾಗಲು ನಿರ್ಧರಿಸಿದ್ದರು. ಸಾರಾ ಕುಟುಂಬದಿಂದ ಎಷ್ಟೇ ವಿರೋಧ ವ್ಯಕ್ತವಾದರೂ ಅದನ್ನೆಲ್ಲ ಲೆಕ್ಕಿಸದೆ ಮದುವೆಯಾದರು.

    ಅಬ್ದುಲ್ಲಾ ಕುಟುಂಬದ ನ್ಯಾಶನಲ್​ ಕಾನ್ಫರೆನ್ಸ್​ ಪಕ್ಷ ಜಮ್ಮುಕಾಶ್ಮೀರದ ಅಸೆಂಬ್ಲಿ ಎಲೆಕ್ಷನ್​​ನಲ್ಲಿ ಸೋತಿತ್ತು. ಅದೇ ಸಮಯದಲ್ಲಿ ಸಾರಾ ವಿವಾಹ ವಿವಾದವೂ ಎದ್ದಿತ್ತು. ಅದೇ ಪಕ್ಷದ ಕೆಲವು ನಾಯಕರೂ ಕೂಡ ಸಾರಾಳ ವಿವಾಹವನ್ನು ಕಟುವಾಗಿ ವಿರೋಧಿಸಲು ಪ್ರಾರಂಭಿಸಿದ್ದರು. ಅಬ್ಬುಲ್ಲಾ ಕುಟುಂಬಕ್ಕೆ ಸಾರಾ ಹಿಂದು ಹುಡುಗನನ್ನು ಮದುವೆಯಾಗುವುದನ್ನು ತಾವು ಬೆಂಬಲಿಸಿದರೆ ಎಲ್ಲಿ ಇಡೀ ಮುಸ್ಲಿಂ ಸಮುದಾಯದ ಕೋಪಕ್ಕೆ ಗುರಿಯಾಗಬೇಕಾಗುತ್ತದೆಯೋ ಎಂಬ ಭಯ ಬೇರೆ ಇತ್ತು. ಇದೆಲ್ಲ ಕಾರಣಕ್ಕೆ ಅವರು ತಮ್ಮ ಮನೆ ಮಗಳ ವಿವಾಹವನ್ನು ಬಹಿಷ್ಕರಿಸಿದ್ದರು.

    ಅಬ್ದುಲ್ಲಾ ಕುಟುಂಬದ ಸಾರಾ ಕಾಫೀರನನ್ನು (ಅನ್ಯಧರ್ಮೀಯ) ವರಿಸುತ್ತಿದ್ದಾಳೆ ಎಂಬ ಒಂದು ಸುದ್ದಿ ಆಗ ಕಾಶ್ಮೀರಿ ಕಣಿವೆಯಲ್ಲಿ ಬಹುದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು. ಹಾಗೇ ಸಾರಾಳನ್ನು ದೂರ ಮಾಡಿದ್ದರ ಬಗ್ಗೆಯೂ ಮಾತುಕತೆ ಜೋರಾಗಿತ್ತು. ಆ ಸಮಯದಲ್ಲಿ ಫಾರುಕ್​ ಆಗಲಿ, ಒಮರ್​ ಆಗಲಿ ಮಾಧ್ಯಮಗಳಿಗೆ ಒಂದೂ ಹೇಳಿಕೆ ನೀಡಿರಲಿಲ್ಲ.

    ಇದೀಗ ಸಚಿನ್ ಪೈಲಟ್​ ಮತ್ತು ಸಾರಾ ವಿವಾಹವಾಗಿ 16 ವರ್ಷಗಳೇ ಕಳೆದಿವೆ. ಇಬ್ಬರು ಮಕ್ಕಳಿದ್ದಾರೆ. ಅಬ್ದುಲ್ಲಾ ಕುಟುಂಬವೂ ಕೂಡ ಈಗ ರಾಜಿ ಮಾಡಿಕೊಂಡಿದೆ. ಎಲ್ಲರೂ ಒಟ್ಟಿಗೇ, ಸಂತೋಷವಾಗಿಯೇ ಇದ್ದೇವೆ ಎಂದು ರಿಯಾಲಿಟಿ ಶೋ ಒಂದರಲ್ಲಿ ಸಚಿನ್​ ಪೈಲಟ್​ ಅವರೇ ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)

    ರಾಮ್​ ರಾಮ್​..! ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಎಂದ ಸಚಿನ್​ ಪೈಲಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts