

ಮುಂಬೈ: ಕರೊನಾವೈರಸ್ ಸೋಂಕು ವ್ಯಾಪಕವಾಗಿ ಪಸರಿಸುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ಬಾಗಶಃ ಲಾಕ್ಡೌನ್ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಸೋಮವಾರದಿಂದ ಸಂಜೆ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ವಾರದ ಕೊನೆಯಲ್ಲಿ ಅಂದರೆ ಭಾನುವಾರ ಪೂರ್ತಿ ಲಾಕ್ಡೌನ್ ಇರಲಿದೆ ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ. ಅಲ್ಲದೇ ಇನ್ನೊಂದು ವಾರ ನೋಡಿಕೊಂಡು ಸಂಪೂರ್ಣ ಲಾಕ್ಡೌನ್ ಮಾಡಬೇಕೋ ಬೇಡವೋ ಎಂದು ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಲಾಕ್ಡೌನ್ ನಿರ್ಧಾರವನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ವಿರೋಧ ಪಕ್ಷ ಬಿಜೆಪಿ, ಲಾಕ್ಡೌನ್ನಲ್ಲಿ ಬಡವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದೆ. ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಪಡ್ನವೀಸ್ ಅವರು, ಹೆಚ್ಚುತ್ತಿರುವ ಕರೊನಾವೈರಸ್ ತಡೆಗೆ ಲಾಕ್ಡೌನ್ ನಿರ್ಧಾರ ಉತ್ತಮ. ಆದರೆ, ಲಾಕ್ಡೌನ್ನಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ತೊಂದರೆ ಆಗಬಾರದು ಎಂದು ಎಚ್ಚರಿಸಿದ್ದಾರೆ.
ಅಲ್ಲದೇ ಮಹಾರಾಷ್ಟ್ರ ಸರ್ಕಾರ 5000 ಕೋಟಿ ರೂಪಾಯಿ ಬಾಕಿ ವಿದ್ಯುತ್ ಬಿಲ್ ವಸೂಲಿ ಮಾಡಲು ಮುಂದಾಗಿರುವುದನ್ನು ಕೈ ಬಿಡಬೇಕು. ಬಡವರಿಗೆ ಹಣಕಾಸಿನ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ಎಲ್ಲ ಚಿತ್ರಮಂದಿರಗಳನ್ನು, ಬಾರ್ ರೆಸ್ಟೋರಂಟ್ಗಳನ್ನು, ಶಾಪಿಂಗ್ ಮಾಲ್ಗಳನ್ನು ಹಾಗೂ ಧಾರ್ಮಿಕ ಕೇಂದ್ರಗಳನ್ನು ಒಂದು ವಾರ ಮುಚ್ಚಲು ಆದೇಶಿಸಲಾಗಿತ್ತು.
ಅವಶ್ಯಕ ಪ್ರಯಾಣಗಳಿಗೆ ಮಾತ್ರ ರಾತ್ರಿ ಅವಕಾಶ ಇರಲಿದೆ. ಹೋಟೆಲ್ಗಳಲ್ಲಿ ಸೇವೆ ನಿಷಿದ್ದವಾಗಿದ್ದು, ಕೇವಲ ಪಾರ್ಸ್ಲ್ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಠಾಕ್ರೆ ಸಚಿವ ಸಂಪುಟ ಸಭೆಯಲ್ಲಿ ಸಂಪೂರ್ಣ ಲಾಕ್ಡೌನ್ ಮಾಡುವ ನಿರ್ಧಾರ ಪ್ರಕಟಿಸಿದರೂ ಕೂಡ ಇದಕ್ಕೆ ಕೆಲ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂದೆ ಸರಿದರು ಎಂದು ವರದಿಗಳು ಹೇಳಿವೆ. (ಏಜೇನ್ಸಿಸ್).