

ಮೈಸೂರು: ಯದುವಂಶದ ಮಹಾರಾಜರು ಪಟ್ಟದಲ್ಲಿ ಇಲ್ಲದಿದ್ದಾಗ ದಸರಾ ಮುನ್ನಡೆಸಿದ್ದು ಹೈದಾರಲಿ ಮತ್ತು ಟಿಪ್ಪು. ಇದನ್ನು ಮರೆಯಬೇಡಿ. ವ್ಯಕ್ತಿಯ ಸ್ಥಾನಮಾನ ಗುರುತಿಸಿ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತದೆ. ಎಸ್.ಎಲ್. ಭೈರಪ್ಪ ಅವರನ್ನು ಕರೆದಾಗ ನಾವು ಟೀಕೆ ಮಾಡಿಲ್ಲ. ತಾಯಿ ಚಾಮುಂಡಿಗೆ ಪೂಜೆ ಮಾಡಿಯೇ ದಸರಾ ಮಾಡುತ್ತೇವೆ ಎಂದು ಶಾಸಕ(MLA)ತನ್ವೀರ್ ಸೇಠ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ(ಆ.25) ಸುದ್ದಿಗಾರರೊಂದಿಗೆ ಮಾತನಾಡಿದರು. ದಸರಾ ಧರ್ಮ, ಜಾತಿಗೆ ಸಿಮೀತವಲ್ಲ. ನನ್ನ ನಂಬಿಕೆ ಏನು ಎಂಬುದು ಎಲ್ಲರಿಗೂ ತೋರಿಸಲು ಆಗಲ್ಲ. ಟೀಕೆ ಮಾಡುವವರಿಗೆ ತಾಳ್ಮೆ ಇರಲಿ. ಬೆಂಕಿಯ ಕಾವು ತೆಗೆದುಕೊಳ್ಳುವ ನೆಪದಲ್ಲಿ ಅದರಲ್ಲಿ ಸುಟ್ಟು ಹೋಗಬೇಡಿ ಎಂದರು.
ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದರೆ ಅದರ ಅರ್ಥ ಅವರು ಬಿಜೆಪಿ ಪರ ಅಂತಾ ಅಲ್ಲ. ಬೇರೆ ರಾಜಕೀಯ ಪಕ್ಷದ ಸಿದ್ಧಾಂತ ಅರ್ಥ ಮಾಡಿಕೊಂಡರೆ ಅದರಲ್ಲಿ ತಪ್ಪೇನಿದೆ? ಯಾರು ಕೊಡು ತಮ್ಮ ಪಕ್ಷದ ಸಿದ್ಧಾಂತವನ್ನು ಬಲಿ ಕೊಡಲ್ಲ ಎಂದರು.
ಡಿಸಿಎಂ ಬಗ್ಗೆ ರಾಜಣ್ಣ ಮಾಡಿರುವ ಟೀಕೆಯೂ ಸರಿ ಇಲ್ಲ. ರಾಜಣ್ಣ ಮಾತಾಡಿರೋದನ್ನು ನಾನು ಒಪ್ಪುವುದಿಲ್ಲ. ಈ ರೀತಿ ಮಾತಾಡಿ ಮಾತಾಡಿ ತಮಗೆ ತಾವೇ ನಷ್ಟ ಅನುಭವಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಯಾರು ಮಾಡಬಾರದು. ದೊಡ್ಡ ಧಾರ್ಮಿಕ ಸಂಸ್ಥೆ ಮೇಲೆ ಆರೋಪ ಮಾಡಿ ಯಾರು ದೊಡ್ಡವರು ಆಗಲ್ಲ. ಈ ಪ್ರಕರಣದ ಹಿಂದೆ ಯಾರದೋ ಕೈವಾಡವಿದೆ. ಸಮಾಜಘಾತಕ ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಬೇಕು ಎಂದರು.