ಮಹಾಕುಂಭ ಮೇಳ ಮುಕ್ತಾಯ; 45 ದಿನಗಳ ಧಾರ್ವಿುಕ ಕಾರ್ಯಕ್ರಮಕ್ಕೆ ತೆರೆ, 66 ಕೋಟಿಗೂ ಹೆಚ್ಚು ಜನರು ಭಾಗಿ

Mahakumbh Mela
Published on

ಪ್ರಯಾಗ್​ರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಕಳೆದ 45 ದಿನಗಳಿಂದ ನಡೆದ ಅತಿದೊಡ್ಡ ಧಾರ್ವಿುಕ ಕಾರ್ಯ ಕ್ರಮ ಮಹಾಕುಂಭ ಮೇಳಕ್ಕೆ ವಿಧ್ಯುಕ್ತವಾಗಿ ತೆರೆಬಿದ್ದಿದೆ. ಪ್ರಯಾಗರಾಜ್​ನಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 144 ವರ್ಷಕ್ಕೆ ಒಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ಜನವರಿ 13 ರಂದು ಚಾಲನೆ ಸಿಕ್ಕಿತ್ತು. ಈ ಬಾರಿ ಕುಂಭ ಮೇಳಕ್ಕೆ ದೇಶ - ವಿದೇಶಗಳಿಂದ ಸಾಗರೋಪಾದಿಯಾಗಿ ಭಕ್ತರ ದಂಡು ಆಗಮಿಸಿತ್ತು. ಪ್ರತಿ ದಿನವೂ ಸರಾಸರಿ 1 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಬುಧವಾರ ಮಹಾಶಿವರಾತ್ರಿಯ ದಿನದಂದು ಕೊನೆಯ ಅಮೃತಸ್ನಾನದೊಂದಿಗೆ ಕುಂಭಮೇಳ ಮುಕ್ತಾಯವಾಗಿದೆ.

ಮಹಾ ಕುಂಭ ಮೇಳ ಭಾರತೀಯ ಪರಂಪರೆಯ ದ್ಯೋತಕ. ಇಲ್ಲಿ ಭಾರತದ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸಂಪ್ರದಾಯ ದರ್ಶನವಾಗಿದೆ. ಇದೇ ವೇಳೆ ಮಹಾಕುಂಭ ಮೇಳ ಎಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಗೆ ಸಾಕ್ಷಿಯಾಗಿದೆ. ಜನಸಂದಣಿ ನಿಯಂತ್ರಣ, ಭದ್ರತೆಗಾಗಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲಾಗಿತ್ತು.

ವ್ಯಾಪಕ ಭದ್ರತೆ: ಪ್ರಯಾಗ್​ರಾಜ್​ನಲ್ಲಿ 40 ಹೆಕ್ಟೇರ್ ಪ್ರದೇಶದಲ್ಲಿ ನಿರ್ವಣವಾಗಿದ್ದ ಮಹಾಕುಂಭ ನಗರ ಕಳೆದ 45 ದಿನಗಳಿಂದ ದಿನದ 24 ಗಂಟೆಯೂ ಚಟುವಟಿಕೆಯ ಕೇಂದ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ 37 ಸಾವಿರ ಪೊಲೀಸರು, 14 ಸಾವಿರ ಹೋಮ್ ಗಾರ್ಡ್ಸ್ ಸೇರಿದಂತೆ ಒಟ್ಟು 60 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಹಾಕುಂಭ ನಗರದ ಮೇಲೆ ನಿಗಾ ಇರಿಸಲು ಎಐ ತಂತ್ರಜ್ಞಾನ ಆಧಾರಿತ 3 ಸಾವಿರ ಸಿಸಿಟಿವಿ ಕ್ಯಾಮರಾಗಳು, ಅಂಡರ್ ವಾಟರ್ ಡ್ರೋನ್ ಸೇರಿದಂತೆ ಒಟ್ಟು 1800 ಡ್ರೋನ್ ಗಳನ್ನು ನಿಯೋಜಿಸಲಾಗಿತ್ತು. 50 ಅಗ್ನಿಶಾಮಕ ಠಾಣೆಗಳು ಮತ್ತು 20 ಫೈರ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿತ್ತು. ಕುಂಭ ಮೇಳದಲ್ಲಿ ಭಾಗವಹಿಸಿದವರ ಸಂಖ್ಯೆ ಸಂಗ್ರಹಿಸಲು ಎಐ ಕ್ಯಾಮರಾಗಳ ಜತೆ ರಸ್ತೆ ಸಾರಿಗೆ ಸಂಸ್ಥೆಗಳು, ಭಾರತೀಯ ರೈಲ್ವೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುಣ್ಯಸ್ನಾನಕ್ಕೆ ಮೇವರೆಗೂ ಅವಕಾಶ: ಮಹಾಕುಂಭ ಮೇಳಕ್ಕೆ ಶಿವರಾತ್ರಿಯ ದಿನದಂದು ಅಧಿಕೃತವಾಗಿ ತೆರೆ ಬಿದ್ದಿದೆ. ಆದರೆ ಗುರು ವೃಷಭ ರಾಶಿ ಪ್ರವೇಶ ಆದಂದಿನಿಂದ ವೃಷಭ ರಾಶಿಯ ನಿರ್ಗಮನದವರೆಗೆ ಮಹಾಕುಂಭ ಶಾಹಿ ಸ್ನಾನಕ್ಕೆ ಅವಕಾಶ ಇರಲಿದೆ. ಅಂದರೆ 2024ರ ಮೇ ತಿಂಗಳ 1ನೇ ತಾರೀಕಿನಿಂದ 2025ರ ಮೇ 15ರವರೆಗೆ ವೃಷಭ ರಾಶಿಯಲ್ಲಿ ಗುರು ಸಂಚಾರ ಕಾಲ ಇರಲಿದೆ. ಈ ಹಿನ್ನೆಲೆಯಲ್ಲಿ ಕುಂಭ ಮೇಳ ಕೊನೆಗೊಂಡಿದ್ದರೂ ಮಹಾಕುಂಭ ಮೇಳದ ಅಮೃತ ಸ್ನಾನದ ಅವಧಿ ಮೇ 15 ರವರೆಗೆ ಇರುತ್ತದೆ. ಅಂದಿನವರೆಗೆ ಚಿತ್ರಾ ಪೌರ್ಣಮಿ, ವಸಂತ ಪೌರ್ಣಮಿ, ಷಡ್ ಗ್ರಹ ಯೋಗದೊಂದಿಗೆ ಅಮಾವಾಸ್ಯೆ ಇತ್ಯಾದಿ ಮಹಾಪರ್ವದ ದಿನಗಳು ಬರಲಿವೆ. ಅದರಲ್ಲೂ ಮಾರ್ಚ್ 29ರ ಅಮಾವಾಸ್ಯೆಯನ್ನು ಮಹಾಪರ್ವ ಕಾಲ ಎಂದು ಪರಿಗಣಿಸಲಾಗುತ್ತದೆ.

Mahakumbh Mela

₹3.25 ಲಕ್ಷ ಕೋಟಿ ವಹಿವಾಟು: ಮಹಾಕುಂಭ ಮೇಳದ ಆಯೋಜನೆಗೆ ಉತ್ತರ ಪ್ರದೇಶ ಸರ್ಕಾರ ಸುಮಾರು 7,500 ಕೋಟಿ ರೂ. ಖರ್ಚು ಮಾಡಿತ್ತು. 45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಜನರು ಕುಂಭ ಮೇಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿ 3.25 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ. ಇದರಿಂದ ಉ.ಪ್ರದೇಶದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬಂದಿದೆ. ಪ್ರಯಾಗ್​ರಾಜ್ ಜತೆಯಲ್ಲೇ ಅಯೋಧ್ಯೆ, ವಾರಾಣಸಿ, ವಿದ್ಯಾಚಲ್, ಚಿತ್ರಕೂಟ ಮತ್ತು ಮೈಹಾರ್​ಗೂ ಜನರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಆರ್ಥಿಕತೆ ವೃದ್ಧಿಗೂ ಹೆಚ್ಚಿನ ಕೊಡುಗೆ ಸಿಕ್ಕಿದೆ.

66 ಕೋಟಿ ಜನರಿಂದ ಪುಣ್ಯಸ್ನಾನ: ಮಹಾಶಿವರಾತ್ರಿಯ ದಿನ 1.44 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದು, 45 ದಿನದಲ್ಲಿ ಒಟ್ಟು 66.21 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. 2019ರಲ್ಲಿ ಅರ್ಧ ಕುಂಭ ಮೇಳದಲ್ಲಿ ಒಟ್ಟು 24 ಕೋಟಿ ಜನರು ಪುಣ್ಯ ಸ್ನಾನ ಮಾಡಿದ್ದರು. ಈ ಬಾರಿ 45 ಕೋಟಿ ಜನರು ಆಗಮಿಸುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಗೂ ಮೀರಿ ದಾಖಲೆ ಪ್ರಮಾಣದ ಭಕ್ತರು ಆಗಮಿಸಿದ್ದಾರೆ ಎಂದು ಉತ್ತರ ಪ್ರದೇಶದ ಸಚಿವ ನಂದ ಗೋಪಾಲ ಗುಪ್ತಾ ತಿಳಿಸಿದ್ದಾರೆ.

ಅಯೋಧ್ಯೆ, ವಾರಾಣಸಿಯಲ್ಲಿ ಭಕ್ತರ ದಂಡು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪ್ರಯಾಗ್ ರಾಜ್​ಗೆ ಆಗಮಿಸಿದ ಭಕ್ತರು ಅಯೋಧ್ಯೆ ಮತ್ತು ವಾರಾಣಸಿಗೂ ತೆರಳಿದ ಹಿನ್ನೆಲೆಯಲ್ಲಿ ಎರಡೂ ಪುಣ್ಯ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಭಕ್ತರು ಸೇರಿದ್ದರು. ರಾಮಮಂದಿರದ ಜತೆಯಲ್ಲೇ ಎರಡೂ ನಗರಗಳಲ್ಲಿರುವ ಶಿವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ನಡೆದಿದೆ.

ಧ್ವಜ ಇಳಿಸಿದ ಶೈವ ಅಖಾಡಗಳು: ಮಾಘಿ ಪೂರ್ಣಿಮೆ ಬಳಿಕ ಬಹುತೇಕ ಅಖಾಡಗಳು ಕುಂಭ ಮೇಳದಿಂದ ನಿರ್ಗಮಿಸಿದ್ದವು. ಮಹಾಶಿವರಾತ್ರಿಯ ದಿನ ಪೂಜೆಯ ಬಳಿಕ ಶೈವ ಅಖಾಡಗಳು ಧರ್ಮ ಧ್ವಜವನ್ನು ಇಳಿಸಿ ಕುಂಭದಿಂದ ನಿರ್ಗಮಿಸಿದವು. ಈ ಮೂಲಕ ಕುಂಭ ಮೇಳಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net