

ನವದೆಹಲಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ನೀಡಿದ ರೆಡ್ ಕಾರ್ನರ್ ನೋಟಿಸ್ ಆಧರಿಸಿ ಇಬ್ಬರು ಪ್ರಮುಖ ಪ್ರವರ್ತಕರಲ್ಲಿ ಒಬ್ಬನಾದ ರವಿ ಉಪ್ಪಲ್ ನನ್ನು ದುಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉಪ್ಪಲ್ ನನ್ನು ಕಳೆದ ವಾರ ಬಂಧಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ದಿನವೊಂದಕ್ಕೆ 200 ಕೋಟಿ ರೂ.ಲಾಭ ಗಳಿಸಿದ ಮಹಾದೇವ ಆ್ಯಪ್ ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ನಡೆದ ಚುನಾವಣೆಯಲ್ಲಿ ರಾಜಕೀಯ ಸಂಚಲನ ಮೂಡಿಸಿತ್ತು.
ಆ್ಯಪ್‌ನ ಪ್ರವರ್ತಕ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ 508 ಕೋಟಿ ಪಾವತಿಸಿದ್ದಾರೆ ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ತನ್ನ ತನಿಖೆಯ ಸಮಯದಲ್ಲಿ, ಉಪ್ಪಲ್ ಪೆಸಿಫಿಕ್ ಮಹಾಸಾಗರದ ವನವಾಟು ಎಂಬ ದೇಶದ ಪಾಸ್‌ಪೋರ್ಟ್ ಹೊಂದಿದ್ದಾನೆ. ಅದನ್ನು ಬಳಸಿಕೊಂಡು "ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ" ಎಂದು ತಿಳಿಸಿತ್ತು. ಆದರೆ ಆತ ತನ್ನ ಭಾರತೀಯ ಪೌರತ್ವವನ್ನು ಬಿಟ್ಟುಕೊಟ್ಟಿರಲಿಲ್ಲ. ಪಾಸ್‌ಪೋರ್ಟ್ ಬಳಸಿ ಆಸ್ಟ್ರೇಲಿಯಾ ವೀಸಾಕ್ಕೂ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ.
ಆ್ಯಪ್‌ನ ಮತ್ತೊಬ್ಬ ಪ್ರವರ್ತಕ ಸೌರಭ್ ಚಂದ್ರಕರ್ ಕಳೆದ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ 200 ಕೋಟಿ ರೂ. ವೆಚ್ಚದ ಮದುವೆಯಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳಿಗೆ ದುಬಾರಿ ಬೆಲೆಯ ಗಿಫ್ಟ್ಗಳನ್ನು ಕೊಟ್ಟಿದ್ದ. ಆತನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗಿನ ಇಡಿ ತನಿಖೆಯ ಪ್ರಕಾರ, ಆ್ಯಪ್‌ನ ಹಿಂದಿರುವ ಪ್ರಮುಖ ರೂವಾರಿಗಳಾದ ಚಂದ್ರಕರ್ ಮತ್ತು ಉಪ್ಪಲ್ ಛತ್ತೀಸ್‌ಗಢದ ಭಿಲಾಯ್ ಮೂಲದವರಾದರೂ ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದರು. ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಸಹ ಇವರಿಬ್ಬರು ನಡೆಸುತ್ತಿದ್ದರು. ಭಾರತ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಯುಎಇಯ ಹಲವು ನಗರಗಳಲ್ಲಿ ಕಾಲ್ ಸೆಂಟರ್‌ಗಳನ್ನು ಸಹ ಇವರು ನಿರ್ವಹಿಸುತ್ತಿದ್ದರು. ಛತ್ತೀಸ್‌ಗಢ ಸೇರಿದಂತೆ ಭಾರತದಾದ್ಯಂತ ಕನಿಷ್ಠ 30 ಕಾಲ್ ಸೆಂಟರ್‌ಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಇವರು ನಡೆಸುತ್ತಿರುವ ಅಪ್ಲಿಕೇಶನ್‌ಗಳು ಸಾವಿರಾರು ಕೋಟಿ ರೂ. ಮೌಲ್ಯದ ವಹಿವಾಟುಗಳಿಗೆ ಸಾಕ್ಷಿಯಾಗಿವೆ. ಇವರ ದೈನಂದಿನ ಲಾಭವು ದಿನಕ್ಕೆ 200 ಕೋಟಿ ರೂ.ಗಳಷ್ಟಿತ್ತು.
ಚಂದ್ರಾಕರ್ ಮತ್ತು ಉಪ್ಪಲ್ ಪೊಲೀಸರು, ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದರು. ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ಪಾವತಿಗಳನ್ನು ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇಡಿ ಈ ಪ್ರಕರಣದಲ್ಲಿ ಇದುವರೆಗೆ 6 ಜನರನ್ನು ಬಂಧಿಸಿದೆ. ಸುನಿಲ್ ದಮಾನಿ, ಅನಿಲ್ ದಮಾನಿ, ಛತ್ತೀಸ್‌ಗಢ ಪೊಲೀಸ್ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಚಂದ್ರಭೂಷಣ ವರ್ಮಾ ಮತ್ತು ಕಾನ್‌ಸ್ಟೆಬಲ್ ಸತೀಶ್ ಚಂದ್ರಕರ್.
ಭಾರತದಲ್ಲಿ ಕಾರ್ಯಾಚರಣೆಗಳನ್ನು ಅನಿಲ್ ಮತ್ತು ಸುನಿಲ್ ದಮಾನಿ ಸಹೋದರರು ನಡೆಸುತ್ತಿದ್ದರು, ಇವರು ಹಲವಾರು ಬೇನಾಮಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.