

ಹೈದರಾಬಾದ್: ಇಂದಿಗೂ ನಮ್ಮ ಸಮಾಜದಲ್ಲಿ ಪೊಲೀಸರೆಂದರೆ ಒಂದು ರೀತಿಯ ಭಯವಿದೆ. ಪೊಲೀಸರ ಬಳಿ ಹೋಗಿ ಮಾತನಾಡಲು ಸಹ ಕೆಲವರು ಹೆದರುತ್ತಾರೆ. ಪೋಲೀಸ್ ಸ್ಟೇಷನ್ಗೆ ಹೋಗುವುದಕ್ಕಂತೂ ತಂಬಾನೇ ಭಯಪಡುತ್ತಾರೆ. ಏಕೆಂದರೆ, ಕೆಲ ಪೊಲೀಸರ ದೌರ್ಜನ್ಯದಿಂದಾಗಿ ಜನರಲ್ಲಿ ಆ ಭಾವನೆ ಬಂದು ಬಿಟ್ಟಿದೆ. ಬಹುತೇಕ ಸಿನಿಮಾಗಳಲ್ಲಿ ಪೊಲೀಸರ ಬಗ್ಗೆ ನೆಗಿಟಿವ್ ಆಗಿ ತೋರಿಸಿರುವುದು ಕೂಡ ಆ ಭಾವನೆ ಬೆಳೆಯಲು ಕಾರಣವಾಗಿದೆ. ಆದರೆ, ಕೆಲ ದುಷ್ಟ ಪೊಲೀಸರ ನಡುವೆ ಒಳ್ಳೆಯ ಅಧಿಕಾರಿಗಳು ಕೂಡ ಇರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಇದು ಸಾಬೀತಾಗಿದೆ.
ಖಾಕಿಗಳು ಮತ್ತು ಜನರ ನಡುವೆ ಉತ್ತಮ ಸೌಹಾರ್ದ ಸಂಬಂಧ ಸ್ಥಾಪಿಸಲು ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಜನರಲ್ಲಿ ಬೇರೂರಿರುವ ಭಯ ಇನ್ನೂ ಕಡಿಮೆಯಾಗಿಲ್ಲ. ಆದರೆ, ಪೊಲೀಸರಿಗೂ ಮಾನವೀಯತೆ ಇದೆ, ಕಷ್ಟದಲ್ಲಿರುವವರ ಪರ ನಿಲ್ಲುತ್ತಾರೆ ಎಂಬುದನ್ನು ಸಾಬೀತುಪಡಿಸುವ ಹಲವು ಘಟನೆಗಳು ಈಗಾಗಲೇ ನಡೆದಿವೆ. ಇತ್ತೀಚೆಗೆ ಇದೇ ವರ್ಗಕ್ಕೆ ಮತ್ತೊಂದು ಘಟನೆ ಸೇರಿದೆ. ಅಂಧ ವ್ಯಕ್ತಿಗೆ ಪೊಲೀಸರು ಮಾಡಿದ ಸಹಾಯ ನೋಡಿ ಎಲ್ಲರೂ ಹ್ಯಾಟ್ಸಾಫ್ ಹೇಳುತ್ತಿದ್ದಾರೆ.
ಮೆಹಬೂಬಾಬಾದ್ ಜಿಲ್ಲೆಯ ನರಸಿಂಹಲಪೇಟ ಪೋಲೀಸರು, ಹಾಡು ಹೇಳುತ್ತಾ ಹೊಟ್ಟೆ ಹೊರೆಯುತ್ತಿದ್ದ ಬಡ ಕುರುಡನ ಬೆನ್ನಿಗೆ ನಿಂತಿದ್ದಾರೆ. ಆತನಿಗಾಗಿ ಹೊಸ ಮನೆಯನ್ನೇ ಕಟ್ಟಿಸಿದ್ದಾರೆ. ಪೆದ್ದನಗರ ಗ್ರಾಮದ ನಿವಾಸಿ ನಾಗಣ್ಣ ಹುಟ್ಟು ಕುರುಡ. ಅವರ ತಂದೆ ಇರೋವರೆಗೂ ಅವರ ಸ್ಥಿತಿ ಚೆನ್ನಾಗಿಯೇ ಇತ್ತು. ಆದರೆ, ತಂದೆಯ ಸಾವಿನ ಬಳಿಕ ನಾಗಣ್ಣನಿಗೆ ಸಂಕಷ್ಟ ಶುರುವಾಯಿತು. ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಾಗಣ್ಣನ ಮೇಲೆ ಬಿತ್ತು. ಹಾಗಾಗಿ ತನಗೆ ಗೊತ್ತಿರುವ ಕಲೆ ಅಂದರೆ ಹಾಡುಗಾರಿಕೆಯಿಂದ ತಾಯಿಗೆ ಆಸರೆಯಾಗುತ್ತಿದೆ. ಆದರೆ, ಅವರು ವಾಸವಾಗಿರುವ ಮನೆ ಶಿಥಿಲಾವಸ್ಥೆಯನ್ನು ತಲುಪಿತ್ತು. ಪ್ರಕೃತಿ ವಿಕೋಪದಿಂದ ಮನೆಯು ಹಾಳಾಯಿತು. ಬಳಿಕ ನಾಗಣ್ಣ ತನ್ನ ತಾಯಿಯೊಂದಿಗೆ ಮನೆಯ ಪಕ್ಕದಲ್ಲಿಯೇ ಪರದೆ ಹಾಕಿದ ಪುಟ್ಟ ಟೆಂಟ್ನಲ್ಲಿ ವಾಸವಾಗಿದ್ದರು. ಇದೇ ವೇಳೆ ನಾಗಣ್ಣ ಅವರ ತಾಯಿಯೂ ಕೂಡ ಅನಾರೋಗ್ಯಕ್ಕೀಡಾದರು.
ನಾಗಣ್ಣನ ಸ್ಥಿತಿ ಕಂಡು ಮರುಗಿದ ಸ್ಥಳೀಯ ಯುವಕರು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದು ಮೆಹಬೂಬಾಬಾದ್ ಪೊಲೀಸರ ಗಮನಕ್ಕೆ ಬಂದಿತು. ತಕ್ಷಣ ನಾಗಣ್ಣನ ಬೆನ್ನಿಗೆ ನಿಂತ ಎಸ್ಪಿ ಸುಧೀರ್ ರಾಮನಾಥ್ ಕೇಕನ್, ಕುಸಿದು ಬಿದ್ದಿದ್ದ ಮನೆಯ ಜಾಗದಲ್ಲಿ ಹೊಸ ಮನೆ ನಿರ್ಮಿಸಲು ನಿರ್ಧರಿಸಿದರು. ಕೆಲ ದಾನಿಗಳ ಸಹಕಾರದಿಂದ ನಾಗಣ್ಣನಿಗೆ ಹೊಸ ಮನೆ ಕಟ್ಟಿಸಿಕೊಟ್ಟಿದ್ದಾರೆ. ಎಸ್ಪಿ ಅವರೇ ಗೃಹ ಪ್ರವೇಶದಲ್ಲಿ ಪಾಲ್ಗೊಂಡು ಪೂಜೆ ಸಹ ಸಲ್ಲಿಸಿದರು. ಅಷ್ಟೇ ಅಲ್ಲದೆ, ತಾಯಿ ಮತ್ತು ಮಗನಿಗೆ ಹೊಸ ಬಟ್ಟೆ ತೊಡಿಸಿ ಸಾಂಪ್ರದಾಯಿಕವಾಗಿ ಗೃಹ ಪ್ರವೇಶ ಮಾಡಿದರು. ಬಳಿಕ ಮನೆ ಮುಂದೆ ಗಿಡವನ್ನೂ ನೆಡಲಾಯಿತು. ನಾಗಣ್ಣ ಅವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಎಸ್ಪಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಪೊಲೀಸರು ಮುತುವರ್ಜಿ ವಹಿಸಿ ಮನೆ ಕಟ್ಟಿಸಿಕೊಟ್ಟಿದ್ದಲ್ಲದೆ, ಸ್ವತಃ ಎಸ್ಪಿ ಅವರೇ ಗೃಹಪ್ರವೇಶಕ್ಕೆ ಹಾಜರಾಗಿದ್ದು, ನಾಗಣ್ಣನ ಸಂತಸಕ್ಕೆ ಮಿತಿಯೇ ಇರದಂತಾಯಿತು. ಆ ಖುಷಿಯಲ್ಲಿ ತಾವೇ ಹಾಡನ್ನು ಹಾಡಿದ್ದಲ್ಲದೆ ಸಿನಿಮಾ ಹಾಡುಗಳಿಗೂ ಕುಣಿದರು. ನಾಗಣ್ಣ ಅವರಿಗೆ ಸಹಾಯ ಮಾಡಿದ ಪೊಲೀಸರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು. ಪೊಲೀಸರ ಈ ಒಳ್ಳೆಯ ಹೃದಯವನ್ನು ಜನರು ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್)