

ಬೇಲೂರು : ಲೋಕ ಕಲ್ಯಾಣಾರ್ಥವಾಗಿ ಪಟ್ಟಣದ ಪುರಸಭೆ ಮುಂಭಾಗದಲ್ಲಿರುವ ದೇಗುಲದ ಶ್ರೀ ವರಸಿದ್ಧಿ ವಿನಾಯಕ ಮೂರ್ತಿಗೆ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಕುಟುಂಬಸ್ಥರಿಂದ ಭಾನುವಾರ ಮಹಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.
ವರಸಿದ್ದಿ ವಿನಾಯಕನಿಗೆ ಪುರೋಹಿತ ಪ್ರಕಾಶ್ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಗಂಗಾಪೂಜೆಯೊಂದಿಗೆ, ಕುಂಕುಮಾರ್ಚನೆ, ಕ್ಷೀರಭಿಷೇಕ ನೆರವೇರಿಸಲಾಯಿತು. ನಂತರ ವಿನಾಯಕನ ಮೂರ್ತಿಗೆ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಯಿತು. ಈ ಪೂಜೆಯ ಪ್ರತಿಫಲವೂ ನಗರ ಹಾಗೂ ತಾಲೂಕಿನ ಎಲ್ಲ ಜನತೆಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಲಾಯಿತು. ನಂತರ ಪೂಜೆಗೆ ಆಗಮಿಸಿದ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿ, ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಇದೇ ಸಂದರ್ಭ ಪುರಸಭೆ ಮುಂಭಾಗದ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಉಷಾ, ಸದಸ್ಯರಾದ ಅಶೋಕ್, ಪ್ರಭಾಕರ್, ಸಿಬ್ಬಂದಿ, ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿ ಟ್ರಸ್ಟ್ ಸದಸ್ಯ ತೀರ್ಥಂಕರ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.