

ಶಿವಮೊಗ್ಗ: ಮಹಾಭಾರತ ಕಲ್ಪನೆಯಲ್ಲ, ಅದು ನೈಜ ಚಿತ್ರಣ. ಮಹಾಭಾರತದಲ್ಲಿ ಉಲ್ಲೇಖವಾಗಿರುವ ಪಟ್ಟಣಗಳು, ನಗರಗಳು, ಐತಿಹಾಸಿಕ ಸ್ಥಳಗಳು ಇಂದಿಗೂ ಅಸ್ತಿತ್ವದಲ್ಲಿವೆ ಎಂದು ಅಮೆರಿಕದ ಲೋವಾ ವಿವಿ ಧಾರ್ಮಿಕ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಫ್ರೆಡ್ರಿಕ್ ಎಂ.ಸ್ಮಿತ್ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸ್ನಾತಕೋತ್ತರ ಸಂಸ್ಕೃತ ವಿಭಾಗದಿಂದ ಮಂಗಳವಾರ ಏರ್ಪಡಿಸಿದ್ದ ಮಹಾಭಾರತ ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಾಭಾರತದಲ್ಲಿ ಪರಿಶುದ್ಧ ರಾಜಕಾರಣವನ್ನು ನೋಡಬಹುದಾಗಿದೆ ಎಂದು ಹೇಳಿದರು.
ಭ್ರಾತ್ವತ್ವದ ಕುರಿತು ವಿಸ್ತಾರವಾಗಿ ಹೇಳಿದ ಕಾವ್ಯವೆಂದರೆ ಅದು ಮಹಾಭಾರತ. ಸಾಮಾಜಿಕ ಜೀವನದಲ್ಲಿ ನೈತಿಕಹೊಣೆಯ ಬಗ್ಗೆ ಸವಿಸ್ತಾರವಾಗಿ ಮಹಾಭಾರತದಲ್ಲಿ ಉಲ್ಲೇಖವಾಗಿದೆ ಎಂದು ಹಲವು ಉದಾಹರಣೆಯೊಂದಿಗೆ ವಿವರಿಸಿದರು.
ಕಿಮ್ಸ್ ಜೆ ಎನ್ನುವರು ಬೈಬಲ್ ಶೈಲಿಯಲ್ಲಿ ಮಹಾಭಾರತವನ್ನು ಮೊಟ್ಟ ಮೊದಲ ಬಾರಿಗೆ ಇಂಗ್ಲೀಷ್‌ಗೆ ಅನುವಾದ ಮಾಡಿದ್ದಾರೆ. ಮಹಾಭಾರತದ ಹೆಮ್ಮೆಯಂದರೆ ಇಡೀ ವಿಶ್ವದಲ್ಲಿ ಸುಮಾರು 500 ಭಾಷೆಗಳಿಗೂ ಅದು ಅನುವಾದಗೊಂಡಿದೆ. ಮಹಾಭಾರತದ ಶಾಂತಿ ಪರ್ವದಲ್ಲಿ ಮೋಕ್ಷದ ಬಗ್ಗೆ ಅತ್ಯಂತ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.
ಮನುಷ್ಯನ ಅಂತಿಮ ಹಂತವೇ ಮೋಕ್ಷ. ಈ ಮೋಕ್ಷವನ್ನು ಹೇಗೆ ಪಡೆಯಬೇಕು? ಜೀವನದ ಆರಂಭದಿಂದ ಅಂತ್ಯದವರೆಗೆ ಹೇಗೆ ನಡೆದುಕೊಳ್ಳಬೇಕು? ಯಾವ ಕರ್ಮದಿಂದ ಮೋಕ್ಷದೆಡೆಗೆ ಹೋಗಲು ಸಾಧ್ಯ? ಎಂಬುದನ್ನು ಮಹಾಭಾರತ ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದರು.
ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಗೋಪಿನಾಥ್ ಮಾತನಾಡಿ, ಮಹಾಭಾರತವು ವಿಶ್ವದ ಅತಿ ದೊಡ್ಡ ಗ್ರಂಥ. ಇದರಲ್ಲಿ ಲಕ್ಷಕ್ಕೂ ಹೆಚ್ಚು ಶ್ಲೋಕಗಳಿವೆ. ಧರ್ಮ- ಕರ್ಮದ ದಾರಿಗಳಿವೆ. ಕರ್ಣ, ದುರ್ಯೋಧನ, ದ್ರೌಪಧಿ, ಯುದಿಷ್ಠಿರರ ಪಾತ್ರಗಳು ವಿಶೇಷವಾಗಿ ಮೂಡಿ ಬಂದಿವೆ ಎಂದರು.
ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳಿಂದ ಸುಮಾರು 130 ಸಂಶೋಧಕರು ಪ್ರಬಂಧವನ್ನು ಮಂಡಿಸಿದರು. ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ವೇದ ಸಂಸ್ಕೃತ ಅಕಾಡೆಮಿಯ ಪ್ರಕಾಶಕ ಮತ್ತು ನಿರ್ದೇಶಕ ಡಾ.ಗೋಪಾಲಕೃಷ್ಣ ಹೆಗಡೆ ಉಪಸ್ಥಿತರಿದ್ದರು.