

ಭಗವಂತ ಗಾಢವಾದ ಸತ್ಯ. ಭಗವಂತನ ಸೃಷ್ಟಿ ನಮ್ಮ ಅರ್ಥಕ್ಕೆ ಸಿಗದ ಪ್ರಶ್ನೆ. ಯಾವ ರೀತಿಯಲ್ಲಿ ಬಿಸಿ ನೀರಿನ ಬಿಸಿ, ತಣ್ಣಿರಿನ ತಂಪನ್ನು ನಾವು ಕಾಣುವುದಿಲ್ಲವೋ, ಅನುಭವಕ್ಕೆ ಮಾತ್ರ ಬರುವುದೋ ಹಾಗೆ ಭಗವಂತನ ಅಸ್ತಿತ್ವವನ್ನು ಮೇಲ್ನೋಟಕ್ಕೆ ಅರಿಯಲು ಆಗುವುದಿಲ್ಲ. ಆದರೆ, ಇರುವುದು ಸತ್ಯ. ಇದು ಭಗವಂತನ ಅಸ್ತಿತ್ವ.
ಉಪವಾಸದ ಮಹತ್ವ: ಒಬ್ಬ ಆರೋಗ್ಯವಂತ ಮನುಷ್ಯ 50 ದಿನಗಳ ಕಾಲ ಆಹಾರ ಇಲ್ಲದೆ, 5 ದಿನ ಆಹಾರ ನೀರಿಲ್ಲದೆ, 5 ನಿಮಿಷ ಗಾಳಿ ಇಲ್ಲದೆ ಬದುಕಬಹುದು. ಆದರೆ, 5 ಸೆಕೆಂಡುಗಳ ಕಾಲ ದೇವರ ಆಶೀರ್ವಾದ ಇಲ್ಲದೆ ಬದುಕಲು ಸಾಧ್ಯವಿಲ್ಲ. ಉಪವಾಸದಲ್ಲಿ ದೈಹಿಕ ಮತ್ತು ಮಾನಸಿಕ ಉಪವಾಸ ಎಂಬ ಎರಡು ವಿಧಗಳಿವೆ. ದೈಹಿಕ ಉಪವಾಸದಿಂದ ಜೀರ್ಣಾಂಗಗಳಿಗೆ ವಿಶ್ರಾಂತಿ, ಇಂದ್ರಿಯ ನಿಗ್ರಹ ಸಾಮರ್ಥ್ಯ, ಹಸಿವಿನ ಅರಿವು ಹಾಗೂ ಆಹಾರದ ಉಳಿತಾಯ ಸೇರಿ 4 ಉಪಯೋಗಗಳು ಆಗುತ್ತವೆ. ಮೂಲ ಅರ್ಥ ಉಪವಾಸದಿಂದ ವೈಜ್ಞಾನಿಕ, ತಾತ್ವಿಕ, ಸಾಮಾಜಿಕ, ಧಾರ್ವಿುಕ ಮತ್ತು ಆರ್ಥಿಕವಾಗಿಯೂ ಉಪಯೋಗ ಆಗಲಿದೆ. ಉಪವಾಸದ ಹೆಸರಿನಲ್ಲಿ ಹಲವು ತಿಂಡಿಗಳನ್ನು ತಿಂದು ನಾಲಿಗೆ ಚಪಲ ತೀರಿಸಿಕೊಳ್ಳುವುದಲ್ಲ. ಷಡ್ವೈರಿಗಳಿಂದ ದೂರ ಇರುವುದೇ ಮಾನಸಿಕ ಉಪವಾಸ ಆಗಿದೆ.
ಯಾರು ಉಪವಾಸ ಮಾಡಬಾರದು?: ವಿವಿಧ ದೀರ್ಘಕಾಲಿಕ ರೋಗಗಳಿಂದ ಬಳಲುವವರು, ಮಧುಮೇಹ, ರಕ್ತದೊತ್ತಡ ರೋಗಿಗಳು, ಮಕ್ಕಳು, ತೀವ್ರ ವೃದ್ಧರು ಕಟ್ಟಾ ಉಪವಾಸ (ಒಂದು ಹನಿ ನೀರು ಸೇವಿಸದ ಮಾದರಿ) ಮಾಡಬಾರದು. ಒಂದು ವೇಳೆ ರೋಗಿಗಳು ಉಪವಾಸ ಮಾಡಿದಲ್ಲಿ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚು ಉತ್ಪಾದನೆಯಾಗಿ, ಆರೋಗ್ಯದಲ್ಲಿ ತೀವ್ರ ಸಮಸ್ಯೆ ಎದುರಾಗುತ್ತದೆ. ಶುಗರ್, ಬಿಪಿ ಹೊಂದಿರುವವರು ಮಧ್ಯದಲ್ಲಿ ಏನಾದರೂ ಸ್ವಲ್ಪ ಆಹಾರ ಸೇವನೆಯೊಂದಿಗೆ ಉಪವಾಸ ಮಾಡಬಹುದು.
ಶಿವನಿಗೆ ಹಲವು ಹೆಸರು: ಶಿವನಿಗೆ ಹಲವಾರು ಹೆಸರುಗಳಿವೆ. ಭಕ್ತರು ತಮಗೆ ಇಷ್ಟ ಬಂದ ಹೆಸರಿನಲ್ಲಿ ಶಿವನನ್ನು ಕರೆದಿದ್ದಾರೆ. ಪೂಜಿಸಿ ಕೃತಾರ್ಥರಾಗುತ್ತಾರೆ. ಶಿವನ ಒಂದೊಂದು ಹೆಸರಿನ ಹಿಂದೆಯೂ ಒಂದೊಂದು ಕತೆ, ಅರ್ಥವಿದೆ. ಅರ್ಧನಾರೀಶ್ವರ, ಭೋಲೆನಾಥ, ಚಂದ್ರಶೇಖರ, ಚಂದ್ರಮೌಳಿ, ಈಶ್ವರ, ಗಿರೀಶ, ಗಂಗಾಧರ, ಜಗದೀಶ, ಮುಕ್ಕಣ್ಣ, ತ್ರಿನೇತ್ರ, ಪಾಲಾಕ್ಷ, ತ್ರಿಲೋಚನ, ಮಹಾದೇವ, ಮೃತ್ಯುಂಜಯ, ನಾಗಾಭರಣ, ನಂಜುಂಡೇಶ್ವರ, ನೀಲಕಂಠ, ಶಂಕರ, ಶಂಭು, ವಿರೂಪಾಕ್ಷ, ತ್ರಯಂಬಕ, ಉಮಾಪತಿ... ಪ್ರತಿಯೊಂದು ಹೆಸರಿಗೂ ವಿಶೇಷ ಅರ್ಥವಿದೆ, ಶಿವಲೀಲೆಯ ಒಂದೊಂದು ಕಥೆಯಿದೆ.
ಅಕ್ಬರ್ಗೆ ದೇವರನ್ನು ತೋರಿಸಿದ್ದು: ದೇವರಿದ್ದಾನೆಯೆ? ಎಲ್ಲಿ ಅವನನ್ನು ತೋರಿಸು? ಎಂದು ಅಕ್ಬರ್ ಒಮ್ಮೆ ಬೀರಬಲ್ಲನಿಗೆ ಕೇಳಿದ ಪ್ರಸಂಗದ ಉದಾಹರಣೆ ಮೂಲಕ ಮೂಲಕ ಡಾ. ಪುತ್ತೂರಾಯರು ಶಿವನ ಇರುವಿಕೆಯನ್ನು ಹೇಳಿದ್ದು ಹೀಗೆ.. ಅಕ್ಬರ್ ಪ್ರಶ್ನೆಗೆ ಬೀರಬಲ್ಲ ತಲೆಕೆಡಿಸಿಕೊಳ್ಳುತ್ತಾನೆ. ಆಗ ಮನೆಯಲ್ಲಿ ಮಗಳು ಅಕ್ಬರನ ಸಮಸ್ಯೆಯನ್ನು ನಾನು ಪರಿಹರಿಸುತ್ತೇನೆ ಎಂದು ಹೇಳುತ್ತಾಳೆ. ಆಗ ಬೀರಬಲ್ಲ ಮಗಳೊಂದಿಗೆ ದರ್ಬಾರ್ಗೆ ಹೋಗುತ್ತಾನೆ. ದರ್ಬಾರಿನಲ್ಲಿ ಬೀರಬಲ್ಲನ ಮಗಳು ಶುದ್ದ ಹಸುವಿನ ಹಾಲು ತರಿಸುತ್ತಾಳೆ. ಹಾಲು ತೋರಿಸಿ, ಈ ಹಾಲಲ್ಲಿ ತುಪ್ಪ ಇದೆಯಾ? ಎಲ್ಲಿ ತೋರಿಸು ಎಂದಾಗ ಅಕ್ಬರ್ ಕಕ್ಕಾಬಿಕ್ಕಿಯಾಗುತ್ತಾನೆ. ಹಾಲು ಕಾಯಿಸಿ, ಹೆಪ್ಪು ಹಾಕಿ ಮೊಸರು ಕಡೆದರೆ ಬೆಣ್ಣೆ ಬರುತ್ತದೆ. ಬೆಣ್ಣೆ ಕಾಯಿಸಿದಾಗ ತುಪ್ಪ ಬರುತ್ತದೆ. ಹಾಲಿನಲ್ಲಿರುವ ತುಪ್ಪವನ್ನು ಹೊರ ತೆಗೆಯಲು ಇಷ್ಟು ಪರಿಶ್ರಮ ಪಡಬೇಕಾದರೆ, ಭಗವಂತನನ್ನು ನೋಡಲು ಇನ್ನೆಷ್ಟು ಪರಿಶ್ರಮ ಪಡಬೇಕು. ದೇವರು ಬರಿಗಣ್ಣಿಗೆ ಕಾಣುವುದಿಲ್ಲ. ಅಧ್ಯಾತ್ಮ ಜ್ಞಾನ ಪಡೆದಾಗ ಮಾತ್ರ ಪ್ರತ್ಯಕ್ಷನಾಗುತ್ತಾನೆ ಎಂದು ಹೇಳಿ ಅಕ್ಬರನ ಕಣ್ಣು ತೆರೆಸುತ್ತಾಳೆ.
ಸತ್ಯಂ ಶಿವಂ ಸುಂದರಂ: ಶಿವನ ವ್ಯಕ್ತಿತ್ವ ನಿಜವಾಗಿಯೂ ಅದ್ಭುತ, ಅಪರೂಪ. ಇತರ ದೇವರಗಿಂತ ಭಿನ್ನ ಹಾಗೂ ವಿಭಿನ್ನ. ಅವನ ಸ್ವರೂಪ ಗುಣ ವೈಭವಗಳನ್ನು ಬಗೆಬಗೆಯಲ್ಲಿ ಕೊಂಡಾಡಲಾಗಿದೆ. ಶಾರೀರಿಕವಾಗಿ ಶಿವ ಸುರಸುಂದರಾಂಗ. ಕೊರಳ ಸುತ್ತ ರುದ್ರಾಕ್ಷಿ, ರುಂಡ ಮಾಲೆ, ತ್ರಿಶೂಲ, ಕಪಾಲ, ಭಿಕ್ಷಾಪಾತ್ರೆ, ತೊಡೆ ಮೇಲೆ ಪಾರ್ವತಿ, ಸರ್ಪಭೂಷಣನಾಗಿದ್ದರೂ ಶಿವ ಸದಾ ಹಸನ್ಮುಖಿ... ಸತ್ಯಂ ಶಿವಂ ಸುಂದರಂ ಎಂಬ ವರ್ಣನೆ ಒಡಮೂಡಿರುವುದೇ ಈ ಪರಿಕಲ್ಪನೆಯಿಂದ.
ಶಿವ ಶಿವ ಎಂದರೆ ಭಯವಿಲ್ಲ: ನಮ್ಮದು ಹಬ್ಬಗಳ ದೇಶ. ವರ್ಷ ಪೂರ್ತಿ ಒಂದರ ಮೇಲೊಂದು ಹಬ್ಬ ಬರುತ್ತವೆ. ಒಂದೊಂದು ಹಬ್ಬಕ್ಕೆ ಒಂದೊಂದು ಅರ್ಥ, ಆಚರಣೆ, ವಿಶೇಷತೆ, ವೈಶಿಷ್ಟ್ಯಗಳಿವೆ. ಸಂಪ್ರದಾಯ ಸಂದೇಶಗಳಿವೆ. ಭಾರತೀಯರು ಆಚರಿಸುವ ಅತಿ ದೊಡ್ಡ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದು. ಶಿವ ಒಂದೇ ಶಕ್ತಿಯ ಭಿನ್ನಭಿನ್ನ ರೂಪ. ಮಹಾಚೈತನ್ಯವನ್ನು ಬೇರೆ ಬೇರೆ ರೂಪ, ಹೆಸರಿನಲ್ಲಿ ಕರೆಯುವ, ಪೂಜಿಸುವ ಪದ್ಧತಿಯಿಂದ ಬಹುದೇವ ಉಪಾಸನೆ ಪ್ರಾರಂಭವಾಯಿತು. ಆಕಾಶದಿಂದ ಕೆಳಗೆ ಬಿದ್ದ ಹನಿ ಸಾಗರವನ್ನೇ ಸೇರುವಂತೆ, ನಾವು ಯಾವ ರೂಪ, ಯಾವ ಭಾಷೆ, ಯಾವ ರೀತಿಯಲ್ಲಿ ಪೂಜಿಸಿದರೂ ಅದು ಭಗವಂತನಿಗೇ ಸಮರ್ಪಣೆ ಎಂಬ ಉದಾತ್ತ ಪರಿಕಲ್ಪನೆ ನಮ್ಮ ಆಚರಣೆಗಳ ಹಿಂದಿದೆ.
ಪೂಜೆ ಮಾಡುವ ವಿಧಾನಗಳು: ದೇವರನ್ನು ಯಾರು, ಯಾವಾಗ, ಎಲ್ಲಿ ಬೇಕಾದರೂ ಪೂಜೆ ಮಾಡಬಹುದು. ಆದರೆ, ಅಚಲವಾದ ನಂಬಿಕೆ, ಭಕ್ತಿ ಭಾವದಿಂದ ಪೂಜೆ ಮಾಡಬೇಕು. ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ನಿಜ ವಾದ ಪೂಜೆಯಾಗಲಿದೆ. ದೇವರಿಗೆ ಅಹಿಂಸೆ, ಶಾಂತಿ, ಸನ್ನಡತೆ, ಸತ್ಯ, ಪರಧರ್ಮ ಸಹಿಷ್ಣುತೆ, ಸೇವೆ ಎಲ್ಲವೂ ಇಷ್ಟವಾದ ಪುಷ್ಪಗಳಾಗಿವೆ. ಈ ಎಲ್ಲ ಸನ್ಮಾರ್ಗಗಳನ್ನು ಜೀವನದಲ್ಲಿ ಅನುಸರಿಸಬೇಕು.
ಶಿವ ಕಲಾವಿದ: ಶಿವ ಕಲಾವಿದ. ಕಲೆ ಕರಗತ ಮಾಡಿಕೊಂಡವನು. ಸಮಚಿತ್ತದ ದ್ಯೋತಕ. ಸಮಾನತೆಯ ಅಭಿವ್ಯಕ್ತಿ. ಶಿವ ಎಂದರೆ ಆನಂದ, ಸುಖ, ಕಲ್ಯಾಣ, ಮಂಗಳ, ಪುಣ್ಯ,ಮೋಕ್ಷ ಎಂಬ ಅರ್ಥವಿದೆ. ತಮೋ ಗುಣವುಳ್ಳ ರಾಕ್ಷಸರ ಅಧಿದೇವತೆ ಶಿವ. ಇಂತಹ ಶಿವನನ್ನು ಪಾರ್ವತಿ ತಪಸ್ಸು ಮಾಡಿ ಒಲಿಸಿಕೊಳ್ಳುತ್ತಾಳೆ.