ಗಣರಾಜ್ಯೋತ್ಸವ ಆಚರಿಸದ ಮದರಸಾಗಳು ಬಂದ್?! ಯೋಗಿ ಸರ್ಕಾರ ಹೇಳಿದ್ದೇನು?

madsrasa
Published on

ಲಖನೌ: ಉತ್ತರಪ್ರದೇಶದಲ್ಲಿ ಗಣರಾಜ್ಯೋತ್ಸವ ಆಚರಿಸದ ಮದರಸಾಗಳನ್ನು ಬಂದ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಹೇಳಿದ್ದಾರೆ ಎನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡಿದೆ. ಜನವರಿ 26 ಕ್ಕೆ ರಾಷ್ಟ್ರಧ್ವಜ ಹಾರಿಸದ, ರಾಷ್ಟ್ರಗೀತೆ ಹಾಡಿಸದ ಮದರಸಾಗಳಿಗೆ ಬೀಗ ಬೀಳಲಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವುಗಳ ಸತ್ಯಾಸತ್ಯತೆ ಹೀಗಿದೆ ನೋಡಿ....

ಇಂಡಿಯಾ ಟುಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ಈ ಬಗ್ಗೆ ಉತ್ತರಪ್ರದೇಶ ಸರ್ಕಾರದಿಂದ ಸ್ಪಷ್ಟನೆ ಕೇಳಿದಾಗ ಹೊರಬಂದ ವಿಚಾರವೆಂದರೆ - ಉತ್ತರ ಪ್ರದೇಶ ಸರ್ಕಾರವು ಈ ರೀತಿಯ ಯಾವುದೇ ಆದೇಶವನ್ನು ಹೊರಡಿಸಿಲ್ಲ. ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮೊಹಸಿನ್ ರಾಜಾ, ಮದರಸಾಗಳಿಗೆ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಗಳನ್ನು ಆಚರಿಸಲು ಈ ಮುನ್ನ ಸೂಚನೆ ನೀಡಿರುವ ಆದೇಶವಿದೆ. ಆದರೆ ಹಾಗೆ ಮಾಡದಿದ್ದರೆ ಅವುಗಳನ್ನು ಮುಚ್ಚುತ್ತೇವೆಂದು ನಾವು ಯಾವಾಗಲೂ ಹೇಳಿಲ್ಲ ಎಂದಿದ್ದಾರೆ. ನಾವು ಮದರಸಾಗಳನ್ನು ಆಧುನೀಕರಿಸಲು ಪ್ರಯತ್ನಿಸುತ್ತಿದ್ದೇವೆಯೇ ಹೊರತು, ಮುಚ್ಚಲು ಅಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಆಲ್ ಇಂಡಿಯಾ ತಂಜೀಮ್ ಉಲಾಮಾ-ಎ-ಇಸ್ಲಾಂನ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಜಲೀಲ್ ನಿಜಾಮಿ ಅವರನ್ನೂ ಈ ಬಗ್ಗೆ ಮಾತನಾಡಿಸಲಾಗಿದೆ. ಅವರು ಕೂಡ ಈ ರೀತಿಯ ಯಾವುದೇ ಸರ್ಕಾರಿ ನಿರ್ದೇಶನ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2017ನೇ ಇಸವಿಯಿಂದ ಸ್ವಾತಂತ್ರ್ಯದಿನ ಮತ್ತು ಗಣರಾಜ್ಯೋತ್ಸವ ಆಚರಣೆ ಮಾಡಲು ನಮಗೆ ಸೂಚನೆಗಳು ಬರುತ್ತಿವೆ. ಆ ಆಚರಣೆಯ ಫೋಟೋ, ವೀಡಿಯೋ ದಾಖಲಿಸಲು ಕೂಡ ಹೇಳಲಾಗಿದೆ. ಆದರೆ ಮದರಸಾಗಳನ್ನು ಮುಚ್ಚುವ ಬಗ್ಗೆ ಯಾವುದೇ ಮಾತಿಲ್ಲ ಎಂದು ನಿಜಾಮಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net