

ಭೋಪಾಲ್: ಪಕ್ಷದಲ್ಲಿ ಸಕ್ರಿಯವಾಗಿದ್ದು, ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದವರನ್ನು ಪಕ್ಷದ ಉನ್ನತ ಜವಾಬ್ದಾರಿಗಳಿಗೆ ಆಯ್ಕೆ ಮಾಡುವುದು ಸಹಜ. ಆದರೆ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷ ತನ್ನ ಯುವ ಘಟಕಕ್ಕೆ ತನ್ನ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡುವ ಬದಲು ಬಿಜೆಪಿಯ ನಾಯಕನನ್ನು ಆಯ್ಕೆ ಮಾಡಿದೆ. ಈ ಮೂಲಕ ಪಕ್ಷ ನಗೆಪಾಟಲಿಗೆ ಗುರಿಯಾಗಿದೆ.
ಮಧ್ಯಪ್ರದೇಶದ ರಾಜಕೀಯ ನಾಯಕ ಜ್ಯೋತಿರಾದಿತ್ಯಾ ಸಿಂಧ್ಯಾ ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ಸೇರ್ಪಡೆಗೊಂಡು ಹಲವು ತಿಂಗಳುಗಳೇ ಕಳೆದಿದೆ. ಜ್ಯೋತಿರಾದಿತ್ಯಾ ಅವರ ಬೆನ್ನಲ್ಲೇ ಹಲವು ನಾಯಕರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಅದರಲ್ಲಿ ಎನ್ಎಸ್ಯುಐ ನಾಯಕ ಹರ್ಷಿತ್ ಸಿಂಘೈ ಕೂಡ ಒಬ್ಬರು. ಅವರು ಪಾರ್ಟಿ ತ್ಯಜಿಸಿ ಸರಿ ಸುಮಾರು 9 ತಿಂಗಳು ಕಳೆದಿದೆ. ಇದೀಗ ಮಧ್ಯಪ್ರದೇಶ ಯುವ ಕಾಂಗ್ರೆಸ್ ಘಟಕವು ಹರ್ಷಿತ್ ಅವರನ್ನು ಜಬಲ್ಪುರದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ. ಆಯ್ಕೆ ಮಾಡಿ, ಹಲವು ಗಂಟೆಗಳ ನಂತರ ಎಚ್ಚೆತ್ತುಕೊಂಡ ಪಕ್ಷ ನೇಮಕಾತಿಯನ್ನು ರದ್ದು ಮಾಡಿದೆ.
ಹರ್ಷಿತ್ ಅವರು ಪ್ರಧಾನ ಕಾರ್ಯದರ್ಶಿ ಚುನಾವಣೆಗೆ 2018ರಲ್ಲಿಯೇ ನಾಮಪತ್ರ ಸಲ್ಲಿಸಿದ್ದರಂತೆ. ಆದರೆ ಅದಾದ ಮೇಲೆ ಚುನಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದು, ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರ ಜತೆ ನಾಮಪತ್ರವೂ ರದ್ದಾಗಿತ್ತು. ನವೆಂಬರ್ನಲ್ಲಿ ನಾಮಪತ್ರ ಹಿಂಪಡೆದಿರುವುದಾಗಿಯೂ ಕಾಂಗ್ರೆಸ್ನ ಕಚೇರಿಗೆ ಇ ಮೇಲ್ ಮಾಡಿದ್ದರಂತೆ. ಆದರೂ ಅದನ್ನು ಗಮನಿಸದ ಪಕ್ಷ, ಅವರನ್ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ. ಚುನಾವಣಾ ಫಲಿತಾಂಶ ಹೊರಬಿದ್ದಂತೆ ಸಾಕಷ್ಟು ಜನರು ಹರ್ಷಿತ್ ಅವರಿಗೆ ಅಭಿನಂದನೆಗಳನ್ನೂ ಸಲ್ಲಿಸಿದ್ದಾರೆ.
ಕಾಂಗ್ರೆಸ್ನ ಈ ತಪ್ಪಿನ ಬಗ್ಗೆ ಮಾತನಾಡಿರುವ ರಾಜ್ಯ ಯುವ ಘಟಕದ ವಕ್ತಾರ ಮಸೂದ್ ಮಿರ್ಜಾ, "ಹರ್ಷಿತ್ ಈ ವಿಚಾರವನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ತಪ್ಪು ನಮ್ಮ ಗಮನಕ್ಕೆ ಬಂದಾಕ್ಷಣ ನೇಮಕಾತಿಯನ್ನು ರದ್ದು ಮಾಡಿದ್ದೇವೆ" ಎಂದು ಹೇಳಿದ್ದಾರೆ. (ಏಜೆನ್ಸೀಸ್)