

Sand Mafia : ಹಿರಿಯ ಅಧಿಕಾರಿಗಳು ಮಾನಸಿಕವಾಗಿ ತುಂಬಾ ಕಿರುಕುಳ ನೀಡಿದರು ಎಂಬ ಗಂಭೀರ ಆರೋಪವನ್ನು ಮಾಡಿ, ಪೊಲೀಸ್ ಠಾಣೆ ಆವರಣದೊಳಗಿನ ತಮ್ಮ ಅಧಿಕೃತ ನಿವಾಸದಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮೃತ ಎಎಸ್ಐ ಅನ್ನು ಪ್ರಮೋದ್ ಪವನ್ (51) ಎಂದು ಗುರುತಿಸಲಾಗಿದೆ. ಇವರನ್ನು ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ಗೊಂಡನ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಜುಲೈ 21ರಂದು ತಮ್ಮ ಸರ್ಕಾರಿ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪವನ್ ಅವರ ಮೃತದೇಹ ಪತ್ತೆಯಾಗಿದೆ.
ತಮ್ಮ ಸಾವಿಗೆ ಕೆಲವೇ ಗಂಟೆಗಳ ಮೊದಲು ರೆಕಾರ್ಡ್ ಮಾಡಲಾದ ಅನೇಕ ವಿಡಿಯೋಗಳಲ್ಲಿ, ಎಎಸ್ಐ ಪವನ್ ಪೊಲೀಸ್ ಯೂನಿಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಮಾಫಿಯಾ ವ್ಯಕ್ತಿಗಳ ವಿರುದ್ಧ ಮಾನಸಿಕ ಕಿರುಕುಳ, ಜಾತಿ ಆಧಾರಿತ ನಿಂದನೆ ಮತ್ತು ಅಪರಾಧ ಸಂಬಂಧ ಗಂಭೀರ ಆರೋಪಗಳನ್ನು ಪವನ್ ಹೊರಿಸಿದ್ದಾರೆ.
ಜುಲೈ 20ರಂದು ಪ್ರಸಾರವಾದ ವಿಡಿಯೋವೊಂದರಲ್ಲಿ, ಪವನ್ ಅವರು ಗೊಂಡನ್ ಠಾಣೆಯ ಉಸ್ತುವಾರಿ ಅರವಿಂದ್ ಭಡೋರಿಯಾ, ಕಾನ್‌ಸ್ಟೆಬಲ್ ಹಾಗೂ ಚಾಲಕ ರೂಪ್ ನಾರಾಯಣ್ ಯಾದವ್ ಮತ್ತು ಥರೆತ್ ಠಾಣೆಯ ಉಸ್ತುವಾರಿ ಅನ್ಫಾಸುಲ್ ಹಸನ್ ವಿರುದ್ಧ ಮಾನಸಿಕ ಹಿಂಸೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ತುರ್ತು ಕೆಲಸಕ್ಕೂ ಅಧಿಕಾರಿಗಳು ಪದೇಪದೆ ರಜೆ ನಿರಾಕರಿಸುತ್ತಿದ್ದರು ಮತ್ತು ದೂರು ಸಲ್ಲಿಸಲು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಪವನ್ ಹೇಳಿದ್ದಾರೆ.
ಸ್ಥಳೀಯ ಮರಳು ಮಾಫಿಯಾ ಕಂಟ್ರೋಲರ್ ಬಬ್ಲು ಯಾದವ್, ಇಬ್ಬರು ಠಾಣಾ ಉಸ್ತುವಾರಿಗಳ ಬೆಂಬಲದಿಂದ ತನಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಹಿರಿಯ ಅಧಿಕಾರಿಗಳೇ ನನ್ನ ಬೆನ್ನಿಗೆ ನಿಂತಿದ್ದಾರೆ ಎಂದು ಸ್ವತಃ ಬಬ್ಲು ಯಾದವ್ ಹೆಮ್ಮೆಯಿಂದ ಹೇಳಿಕೊಂಡಿದ್ದು, ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಅಂದಿನಿಂದ, ನನಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ನನ್ನ ಆಧಾರ್ ಅಥವಾ ಸಮಗ್ರ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಸಹ ಠಾಣೆಯಿಂದ ಹೊರಗೆ ಹೋಗಲು ಅವಕಾಶ ನೀಡಿಲ್ಲ. ಪ್ರತಿದಿನ ನನ್ನ ಮೇಲೆ ಜಾತಿ ನಿಂದನೆಗಳನ್ನು ಮಾಡಲಾಗುತ್ತಿದೆ. ಅಲ್ಲದೆ, ಸರಿಯಾಗಿ ಊಟ ಕೂಡ ಮಾಡಲು ಬಿಡುತ್ತಿಲ್ಲ ಎಂದು ಪ್ರಮೋದ್ ಪವನ್ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಜುಲೈ 2ರ ದಿನಾಂಕ ಇರುವ ಡೆತ್ನೋಟ್ ಹಾಗೂ ಔಪಚಾರಿಕ ದೂರು ಪತ್ರವನ್ನು ಸಹ ಪವನ್ ಬಿಟ್ಟು ಹೋಗಿದ್ದಾರೆ. ಅದರಲ್ಲಿ ಎಸ್‌ಪಿ ಸೂರಜ್ ವರ್ಮಾ ಅವರನ್ನು ಉಲ್ಲೇಖಿಸಿ ಪವನ್ ಔಪಚಾರಿಕವಾಗಿ ದೂರು ದಾಖಲಿಸಿದ್ದಾರೆ. ಇದೀಗ ಡೆತ್ನೋಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೇ ಪತ್ರ ಪವನ್ ಅವರ ಕಿರುಕುಳ ಮತ್ತು ಜೀವ ಬೆದರಿಕೆ ಆರೋಪಗಳನ್ನು ಪುನರುಚ್ಚರಿಸಿದೆ.
ವಿಡಿಯೋ ಮತ್ತು ಡೆತ್ನೋಟ್ ಹೊರಬಂದ ನಂತರ, ದಾತಿಯಾ ಎಸ್‌ಪಿ ಸೂರಜ್ ವರ್ಮಾ ವರದಿಗಾರರೊಂದಿಗೆ ಮಾತನಾಡುತ್ತಾ, ದೂರು "ಇನ್ವರ್ಡ್ ರಿಜಿಸ್ಟರ್‌ನಲ್ಲಿ ಬಂದಿರಬಹುದು ಆದರೆ, ನಾನದನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಕ್ರಮದ ಬಗ್ಗೆ ಕೇಳಿದಾಗ, ಆರೋಪಿ ಅಧಿಕಾರಿಗಳನ್ನು ಅವರ ಹುದ್ದೆಗಳಿಂದ ತೆಗೆದುಹಾಕಲಾಗುವುದು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ವರ್ಮಾ ಭರವಸೆ ನೀಡಿದ್ದಾರೆ.
ಮಂಗಳವಾರ ಬೆಳಗಿನ ಜಾವ ಪೊಲೀಸ್ ಠಾಣೆ ಆವರಣದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಎಎಸ್‌ಐ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡುಬಂದಿದೆ. ವಿಡಿಯೋಗಳಲ್ಲಿ ಕೇಳಿಬಂದಿರುವ ಆರೋಪಗಳ ಆಧಾರದ ಮೇಲೆ, ಇಡೀ ವಿಷಯದ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ ಎಂದು ವರ್ಮಾ ಅವರು ಹೇಳಿದ್ದಾರೆ. (ಏಜೆನ್ಸೀಸ್)