

ಭೋಪಾಲ್: ಮಧ್ಯಪ್ರದೇಶದ ಜಯೋರಾ ಪಟ್ಟಣದ ದೇವಾಲಯದ ಆವರಣಕ್ಕೆ ಹಸುವಿನ ತಲೆ ಎಸೆದ ಆರೋಪದ ಮೇಲೆ ನಾಲ್ವರು ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಪ್ರಕರಣ ದಾಖಲಿಸಲಾಗಿದೆ. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಶುಕ್ರವಾರ ಮುಂಜಾನೆ ರತ್ಲಾಮ್ ಜಿಲ್ಲೆಯ ಜಯೋರಾದ ಜಗನ್ನಾಥ ಮಹಾದೇವ ದೇವಸ್ಥಾನದ ಅರ್ಚಕರು ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗ, ಆವರಣದಲ್ಲಿ ಹಸು ಕರುವಿನ ತಲೆ ಹಾಕಿದ್ದು, ಅದರಿಂದ ರಕ್ತ ಹರಿದಿತ್ತು. ಇದರ ಬಗ್ಗೆ ಅವರು ಕೂಡಲೇ ಪೊಲೀಸರು ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದರು.
ಜಯೋರಾದಲ್ಲಿ ಘಟನೆ ಬಳಿಕ ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಯಿತು. ಪಟ್ಟಣ ಬಂದ್ ಮಾಡಲಾಗಿದ್ದು, ಲಾಠಿಚಾರ್ಜ್ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಲಾಗಿತ್ತು.
ಹಸುವಿನ ತಲೆ ಕಡಿದು ದೇವಾಲಯಕ್ಕೆ ಎಸೆದವರನ್ನು ಸಲ್ಮಾನ್ ಮೇವಟಿ (24), ಶಾಕಿರ್ ಖುರೇಷಿ (19), ನೋಶಾದ್ ಖುರೇಷಿ (40), ಮತ್ತು ಶಾರುಖ್ ಸತ್ತಾರ್ (25) ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಠಿಣ ಸೆಕ್ಷನ್ ಗಳನ್ನು ಹಾಕಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಖಾಖಾ ತಿಳಿಸಿದ್ದಾರೆ.
ಮೇವತಿ ಮತ್ತು ಖುರೇಷಿಯನ್ನು ಶುಕ್ರವಾರ ಬಂಧಿಸಿದ್ದು, ನೋಶಾದ್ ಮತ್ತು ಸತ್ತಾರ್ ನನ್ನು ಗುರುವಾರ ಬಂಧಿಸಲಾಯಿತು. ನೋಶಾದ್ ವಿರುದ್ಧ 20 ಪ್ರಕರಣಗಳಿದ್ದು, ಜಿಲ್ಲೆಯಿಂದ ಒಮ್ಮೆ ಗಡಿಪಾರು ಮಾಡಲಾಗಿತ್ತು ಎಂದು ರಾಕೇಶ್ ಖಾಖಾ ವಿವರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಮನೋಜ್ ಕುಮಾರ್ ಸಿಂಗ್, “ಈ ಭಾಗದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಪ್ರಯತ್ನ ನಡೆದಿದೆ. ಆದಾಗ್ಯೂ, ಸಮಯೋಚಿತ ಕ್ರಮಗಳು ಶಾಂತಿ ಕದಡುವುದನ್ನು ತಡೆಯುತ್ತವೆ. ಹೀಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರು ಮತ್ತು ಆಡಳಿತಕ್ಕೆ ಸೂಚಿಸಿದ್ದಾರೆ.