ಬಕ್ರೀದ್​ಗೆ ಮೇಕೆ ಖರೀದಿ ಜೋರು..ಒಂದಕ್ಕೆ 50ಸಾವಿರ ರೂ.ನಿಂದ 7.5ಲಕ್ಷ ರೂ.ಗೆ ಮಾರಾಟ!

bakrid
Published on

ಭೋಪಾಲ್​: ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ಬಕ್ರೀದ್ ಸಂದರ್ಭ ಮೇಕೆಗಳ ಬೆಲೆ ಗಗನಕ್ಕೇರಿದೆ. ಮಾರಾಟಗಾರರು 50ಸಾವಿರ ರೂ.ನಿಂದ 7.5 ಲಕ್ಷ ರೂ.ವರೆಗೆ ಮೇಕೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಜಾನುವಾರು ಮಾರುಕಟ್ಟೆ, ಸಂತೆಗಳಲ್ಲಿ ಖರೀದಿದಾರರು ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದು, ಕುರಿಗಳ ಜೊತೆಗೆ ಕೊಬ್ಬಿರುವ ಮೇಕೆಗಳನ್ನು ಸಾವಿರಾರು ರೂ.ಕೊಟ್ಟು ಖರೀದಿಸುತ್ತಿದ್ದಾರೆ.

ಮೇಕೆ ಮಾರಾಟಗಾರ ಸೈಯದ್ ಶಹಾಬ್ ಅಲಿ, “ನಾನು ಮುಂಬೈ, ಪುಣೆ, ನಾಗ್ಪುರ ಮತ್ತು ಗುಜರಾತ್‌ನಲ್ಲಿ ಮೇಕೆಗಳನ್ನು 50ಸಾವಿರ ರೂ.ನಿಂದ 7.5 ಲಕ್ಷ ರೂ. ತನಕ ಮಾರಾಟ ಮಾಡಿದ್ದೇನೆ. ಭೋಪಾಲ್ ನಲ್ಲಿ ಒಂದು ಮೇಕೆ 4 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಅದು 155 ಕೆಜಿ ತೂಕದ್ದಾಗಿತ್ತು. 7 ಲಕ್ಷ ರೂಗೆ ಮಾರಾಟ ಮಾಡಿದ ಮೇಕೆ 'ರಫ್ತಾರ್' ಜಾತಿಯದ್ದಾಗಿತ್ತು. ಇದು ದೇಶದ ಅತ್ಯಂತ ದುಭಾರಿ ಮೇಕೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾನೆ.

ರಾಷ್ಟ್ರದಾದ್ಯಂತ ಸೋಮವಾರ ಬಕ್ರೀದ್‌ ಆಚರಿಸಲಾಗುತ್ತಿದ್ದು, ಸಿದ್ಧತೆಗಳು ತೀವ್ರಗೊಳ್ಳುತ್ತಿದ್ದಂತೆ, ಕರ್ನಾಟಕ ಸೇರಿ ಎಲ್ಲೆಡೆ ಜಾನುವಾರು ಸಂತೆ, ಮಾರುಕಟ್ಟೆಗಳಲ್ಲಿ ಚಟುವಟಿಕೆ ಗರಿಗೆದರಿದೆ. ಖರೀದಿದಾರರು ಉತ್ಸಾಹದಿಂದ ಕುರಿ, ಮೇಕೆಗಳನ್ನು ಕೊಂಡೊಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಬಕ್ರಾ ಈದ್ ಎಂದೂ ಕರೆಯಲ್ಪಡುವ ಈದ್-ಅಲ್-ಅಧಾ, ಧು ಅಲ್-ಹಿಜ್ಜಾದ 10 ನೇ ದಿನದಂದು ಆಚರಿಸಲಾಗುವ ಮಹತ್ವದ ಇಸ್ಲಾಮಿಕ್ ಹಬ್ಬವಾಗಿದೆ. ಇದು ತ್ಯಾಗವನ್ನು ಸಂಕೇತಿಸುತ್ತದೆ. ಪ್ರವಾದಿ ಅಬ್ರಹಾಂ ದೇವರ ಮೇಲಿನ ಅಚಲ ಭಕ್ತಿಯನ್ನು ಸ್ಮರಿಸುತ್ತದೆ. ಹಬ್ಬವು ಸಂತೋಷ, ಶಾಂತಿ ಮತ್ತು ಸಮುದಾಯಗಳ ನಡುವೆ ಏಕತೆಯನ್ನು ಬೆಳೆಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net