ವಿಶ್ವಾಸಮತಕ್ಕೆ ಅವಕಾಶ ಕೋರಿದ ಕಮಲ್​ನಾಥ್: 6 ಸಚಿವರನ್ನು ವಜಾ ಮಾಡಿದ ರಾಜ್ಯಪಾಲ

Kamal Nath vvani
Published on

ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್​ನಾಥ್ ರಾಜ್ಯಪಾಲ ಲಾಲ್​ಜಿ ಟಂಡನ್​ರನ್ನು ಶುಕ್ರವಾರ ಭೇಟಿಯಾಗಿ ತಮ್ಮ ಸರ್ಕಾರದ ವಿಶ್ವಾಸಮತ ಸಾಬೀತಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಪಕ್ಷ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ನಿಷ್ಠರಾದ 22 ಬಂಡಾಯ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದರಿಂದ ಕಮಲ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಹಾಗೂ 22 ಶಾಸಕರನ್ನು ಒತ್ತೆಯಿಟ್ಟುಕೊಂಡಿದೆ ಎಂದು ಆರೋಪಿಸಿದ ನಾಥ್, ಸದನದಲ್ಲಿ ಬಲಾಬಲ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಕೋರಿದರು. ರಾಜ್ಯಪಾಲರಿಗೆ ಸಲ್ಲಿಸಿದ 11 ಪುಟಗಳ ಪತ್ರದಲ್ಲಿ ನಾಥ್ ಮಾರ್ಚ್ 3ರಿಂದ 10ರವರೆಗಿನ ಅವಧಿಯ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ವಿವರಿಸಿದ್ದಾರೆ.

6 ಸಚಿವರ ವಜಾ: ರಾಜೀನಾಮೆ ನೀಡಿದ್ದ 22 ಶಾಸಕರ ಗುಂಪಿನಲ್ಲಿರುವ ಆರು ಸಚಿವರನ್ನು ಮುಖ್ಯಮಂತ್ರಿ ಕಮಲ್​ನಾಥ್ ಶಿಫಾರಸಿನ ಮೇರೆಗೆ ರಾಜ್ಯಪಾಲರು ವಜಾ ಮಾಡಿದ್ದಾರೆ.

ನಿಷೇಧಾಜ್ಞೆ ಜಾರಿ: ಬಂಡಾಯವೆದ್ದ 19 ಕಾಂಗ್ರೆಸ್ ಶಾಸಕರು ಭೋಪಾಲ್​ಗೆ ಶುಕ್ರವಾರ ಮರಳುತ್ತಾರೆ ಎಂಬ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಎರಡು ಗುಂಪಿನ ಮಧ್ಯೆ ಸಂಭಾವ್ಯ ಘರ್ಷಣೆ ತಡೆಯಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಸಿಂಧಿಯಾ ವಿರುದ್ಧದ ಪ್ರಕರಣಕ್ಕೆ ಮರುಜೀವ: ಜ್ಯೋತಿರಾದಿತ್ಯ ಸಿಂಧಿಯಾ ಮತ್ತವರ ಕುಟುಂಬದ ವಿರುದ್ಧದ ಭೂಕಬಳಿಕೆ ಪ್ರಕರಣವೊಂದಕ್ಕೆ ರಾಜ್ಯದ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಮರುಜೀವ ನೀಡಿದೆ. 2014ರಲ್ಲಿ ಆಗ ಕೇಂದ್ರ

ಸಚಿವ ಸಿಂಧಿಯಾ ವಿರುದ್ಧ ಭೂಕಬಳಿಕೆ ಮೊಕದ್ದಮೆಯೊಂದು ದಾಖಲಾಗಿತ್ತು. ಸಾಕ್ಷ್ಯಗಳ ಕೊರತೆ ಕಾರಣ ಪ್ರಕರಣವನ್ನು 2018ರಲ್ಲಿ ಅಂತ್ಯಗೊಳಿಸಲಾಗಿತ್ತು. ಆದರೆ ಹೊಸ ಸಾಕ್ಷ್ಯಗಳು ಲಭ್ಯವಾಗಿರುವುದರಿಂದ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಲು ಇಒಡಬ್ಲ್ಯೂ ನಿರ್ಧರಿಸಿದೆ. ಜಮೀನು ಮಾರಾಟ ಮಾಡುವಾಗ ಆಸ್ತಿ ಪತ್ರವನ್ನು ಫೋರ್ಜರಿ ಮಾಡಲಾಗಿದೆ ಎನ್ನುವುದು ಸುರೇಂದ್ರ ಶ್ರೀವಾಸ್ತವ ಎನ್ನುವವರು ಸಲ್ಲಿಸಿರುವ ದೂರಿನ ಸಾರಾಂಶ. ಇದೊಂದು ರಾಜಕೀಯ ಸೇಡಿನ ಕ್ರಮವೆಂದು ಸಿಂಧಿಯಾ ಆಪ್ತ ಪಂಕಜ್ ಚತುರ್ವೆದಿ ಹೇಳಿದ್ದಾರೆ.

ಮಧ್ಯಪ್ರವೇಶಕ್ಕೆ ಕೈ ನಿಯೋಗ ಮನವಿ

ಬೆಂಗಳೂರು: ರೆಸಾರ್ಟ್​ನಲ್ಲಿರುವ ಮಧ್ಯಪ್ರದೇಶದ ನಮ್ಮ ಪಕ್ಷದ ಶಾಸಕರ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಎಡಿಜಿಪಿ ಅಮರ್​ಕುಮಾರ್ ಪಾಂಡೆಯನ್ನು ಭೇಟಿ ಮಾಡಿ ಒತ್ತಾಯಿಸಿದೆ. ಒಬ್ಬ ಶಾಸಕರ ತಂದೆಯೂ ನಿಯೋಗದಲ್ಲಿದ್ದರು. ಮಧ್ಯಪ್ರದೇಶ ಕೆಲ ಸಚಿವರೂ ಜತೆಗಿದ್ದರು. ನಮ್ಮವರ ಭೇಟಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ತಾವು ಮಧ್ಯ ಪ್ರವೇಶಿಸಿ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದು ನಿಯೋಗ ಒತ್ತಾಯಿಸಿತು. 3 ದಿನಗಳ ಹಿಂದೆ ರೆಸಾರ್ಟ್​ನಲ್ಲಿರುವ ಮಧ್ಯಪ್ರದೇಶ ಸಚಿವರು, ಶಾಸಕರು ಸೇರಿ 19 ಮಂದಿ ಭದ್ರತೆ ನೀಡಬೇಕೆಂದು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು. ಈ ಮಧ್ಯೆ, ಶಾಸಕರು ಭೋಪಾಲ್​ಗೆ ತೆರಳಲು ವಿಮಾನನಿಲ್ದಾಣಕ್ಕೆ ಹೋಗಿದ್ದರು. ಆದರೆ ಮತ್ತೆ ರೆಸಾರ್ಟ್​ಗೆ ಮರಳಿದ್ದಾರೆ ಎನ್ನಲಾಗಿದೆ.

ಕೋಟೆ ಭೇದಿಸಲು ವಿಫಲ: ಹೇಗಾದರೂ ಮಾಡಿ ಒಂದಿಬ್ಬರು ಶಾಸಕರನ್ನಾದರೂ ಮನವೊಲಿಸಿ ಗುಂಪಿನಿಂದ ಬೇರ್ಪಡಿಸಲು ಕಾಂಗ್ರೆಸ್ ನಿಯೋಗ ಪ್ರಯತ್ನಿಸಿತ್ತು. ಆದರೆ, ಪೊಲೀಸರೇ ಪ್ರಯತ್ನ ವಿಫಲಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net