

ಬೆಂಗಳೂರು: ಕ್ಯಾನ್ಸರ್ನಿಂದ (Cancer) ಬಳಲುತ್ತಿರುವ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ (Shivarajkumar) ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅಭಿಮಾನಿಗಳು ಹಾಗೂ ಕುಟುಂಬಸ್ಥರ ಪ್ರಾರ್ಥನೆಯ ಫಲವಾಗಿ ಅವರು ಕ್ಯಾನ್ಸರ್ ಮುಕ್ತವಾಗಿದ್ದಾರೆ. ಜನವರಿ 26ರ ವೇಳೆಗೆ ಭಾರತಕ್ಕೆ ವಾಪಸ್ ಆಗಲಿರುವ ನಟ ಶಿವರಾಜ್ಕುಮಾರ್ ಅವರನ್ನು ಎದುರು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ನಟ ಶಿವರಾಜ್ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ಹೇಗೆ ನಡೆಯಿತು ಎಂಬುದರ ಬಗ್ಗೆ ಅವರ ಸಂಬಂಧಿ, ಸಚಿವ ಮಧು ಬಂಗಾರಪ್ಪ (Madhu Bangarappa) ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ (Madhu Bangarappa), ಡಾ. ಮುರುಗೇಶ್ ಅವರ ನೇತೃತ್ವದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಯಿತು. ಒಟ್ಟು 6 ಆಪರೇಷನ್ ಮಾಡಲಾಗಿದ್ದು, ದೇಹದೊಳಗೆ 190 ಹೊಲಿಗೆ ಹಾಕಲಾಗಿದೆ. 5.5 ಗಂಟೆಯಲ್ಲಿ ಸರ್ಜರಿ ಮಾಡೋ ಪ್ಲಾನ್ ಇತ್ತು. 30 ನಿಮಿಷಕ್ಕೆ ಮುಂಚೆಯೇ ಆಪರೇಷನ್ ಮುಗಿಯಿತು. ಯಾವುದೇ ತೊಂದರೆ ಆಗಲಿಲ್ಲ. 4 ಗಂಟೆ ಒಳಗೆ ನಾವು ಹೋಗಿ ಮಾತನಾಡಿಸಿದೆವು.
ಎಲ್ಲರ ಹಾರೈಕೆ ಹಾಗೂ ನುರಿತ ವೈದ್ಯರಿಂದ ಎಲ್ಲವೂ ಚೆನ್ನಾಗಿ ಆಗಿದೆ. ಎಲ್ಲರೂ ಶಿವಣ್ಣನವರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಬ್ಲಾಡರ್ ರಿಕನ್ಸ್ಟ್ರಕ್ಷನ್ ಮಾಡಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕಿಡ್ನಿ ಫೇಲ್ಯೂರ್ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಶಿವಣ್ಣಗೆ ತಲೆಯಲ್ಲಿ ಒಂದು ಸ್ಟಂಟ್ ಇದೆ, ಹಾರ್ಟ್ ಅಲ್ಲಿ ಒಂದು ಸ್ಟಂಟ್ ಇದೆ. ದಿನವೂ 4-5 ಕಿಲೋ ಮೀಟರ್ ವಾಕ್ ಮಾಡ್ತಿದ್ದಾರೆ. ಮನೆ ಎದುರಿಗೆ ಇರೋ ಕೆರೆ ಸುತ್ತಲೂ ನಾಲ್ಕೈದು ರೌಂಡ್ ಸುತ್ತುತ್ತಿದ್ದಾರೆ. ಖುದ್ದು ವೈದ್ಯರೇ ಹೇಳಿರೋ ಪ್ರಕಾರ ಫಿಟ್ ಇದ್ದಾರಂತೆ. ಅಷ್ಟೇ ಅಲ್ಲ, ಜನವರಿ 25ನೇ ತಾರೀಖಿನಂದು ಶಿವಣ್ಣ ಬರಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಮಾಹಿತಿ ನೀಡಿದ್ದಾರೆ.