

ಮಾಗಡಿ: ವಾರಾಂತ್ಯದ ಲಾಕ್‌ಡೌನ್ ಮುಗಿದ ಹಿನ್ನೆಲೆಯಲ್ಲಿ ಪಟ್ಟಣದ ತರಕಾರಿ, ಹೂವಿನ ಮಾರುಕಟ್ಟೆಯಲ್ಲಿ ಗ್ರಾಹಕರು ತರಕಾರಿ, ಹೂವು ಖರೀದಿಸಲು ಸೋಮವಾರ ಬೆಳಗ್ಗೆ ಮುಗಿಬಿದಿದ್ದರು.
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ತರಕಾರಿ, ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಯಿತು. ನಂತರ ಮೆಡಿಕಲ್ಸ್, ಪೆಟ್ರೊಲ್ ಬಂಕ್, ಮದ್ಯದಂಗಡಿ, ನಂದಿನಿ ಕೇಂದ್ರ, ಆಸ್ಪತ್ರೆಗಳನ್ನು ಹೊರತು ಪಡಿಸಿ ಉಳಿದ ಎಲ್ಲದಕ್ಕೂ ಬೀಗ ಮುದ್ರೆ ಜಡಿಯಲಾಗಿತ್ತು.
ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಮರೆತು ಗ್ರಾಹಕರು ಮತ್ತು ವ್ಯಾಪಾರಿಗಳು ನಿಯಮಗಳನ್ನು ಗಾಳಿಗೆ ತೂರಿದರು. ಮಂಗಳವಾರದಿಂದ 14 ದಿನಗಳ ಕಾಲ ರಾಜ್ಯವ್ಯಾಪ್ತಿ ಲಾಕ್‌ಡೌನ್ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದಂತೆ ಕಳೆದ ವರ್ಷದಂತೆ ಈ ಬಾರಿಯೂ ಮದ್ಯದಂಗಡಿಗಳು ಬೀಗ ಹಾಕುತ್ತಾರೆಂದು ಪಾನಪ್ರಿಯರು ಪ್ರಿಯರು ಮದ್ಯದಂಗಡಿಗಳ ಮುಂದೆ ಕ್ಯೂ ನಿಂತು ತಮಗೆ ಬೇಕಾದಷ್ಟು ಮದ್ಯ ಖರೀದಿಸಿ ಚೀಲಗಳಲ್ಲಿ ಬಾಟಲಿಗಳನ್ನು ಕೊಂಡೊಯ್ಯುತ್ತಿದ್ದುದು ಸಾಮಾನ್ಯ ವಾಗಿತ್ತು.
ಪಟ್ಟಣದ ಆರ್‌ಅರ್‌ರಸ್ತೆ, ಕಲ್ಯಾಗೇಟ್, ಕೆಂಪೇಗೌಡ ಸರ್ಕಲ್‌ಗಳಲ್ಲಿ ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೆಲ ಖಾಸಗಿ ಬಸ್, ಆಟೋ, ಕಾರುಗಳು ಮಾತ್ರ ಸಂಚರಿಸುತ್ತಿದ್ದವು.