ಮದ್ದೂರಮ್ಮನವರ ಕೊಂಡೋತ್ಸವ ಇಂದು

15M.D.R.5
ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಿರುವುದು.
Published on

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ ಜಾತ್ರಾ ಮಹೋತ್ಸವ ಏ.13 ರಿಂದ ಆರಂಭವಾಗಿದ್ದು, 19ವರೆಗೆ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಏ.16ರ ಬುಧವಾರ ಶ್ರವಣ ನಕ್ಷತ್ರ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗ್ಗೆ 6ಕ್ಕೆ ಶ್ರೀ ಮದ್ದೂರಮ್ಮನ ಕೊಂಡೋತ್ಸವ ದೇವಾಲಯದ ಆವರಣದಲ್ಲಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಲಿದೆ.

ಏ.15 ರಂದು ಬೆಳಗ್ಗೆ 10.30 ಗಂಟೆಗೆ ಶ್ರೀ ಮದ್ದೂರಮ್ಮ ದೇವಸ್ಥಾನದಲ್ಲಿ ಹೋಮ-ಹವನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 2.30ಕ್ಕೆ ಶ್ರೋ ಎಲ್ಲಮ್ಮ ದೇವಿಯವರಿಗೆ ಚಂದ್ರ ಭಂಡಾರ ಸೇವೆ ಸಲ್ಲಿಸಲಾಯಿತು. ಸಂಜೆ 4 ಗಂಟೆಗೆ ಗ್ರಾಮಸ್ಥರಿಂದ ಕೊಂಡ ಬಂಡಿ ಉತ್ಸವ, ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಜೆ 6.30ಕ್ಕೆ ಶ್ರೀ ಮದ್ದೂರಮ್ಮನವರ ಮೂಲ ದೇವಸ್ಥಾನದಲ್ಲಿ ಅಭಿಷೇಕ ಮತ್ತು ಹೋಮ ಹವನ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ರಾತ್ರಿ 11.30ಕ್ಕೆ ಕೊಂಡಕ್ಕೆ ಅಗ್ನಿಸ್ಪರ್ಶ ಪೂಜೆ ಮಾಡಲಾಯಿತು.

ರಾತ್ರಿ 1 ಗಂಟೆಗೆ ಮಠಮನೆಯಿಂದ ಮಂಗಳ ವಾದ್ಯದೊಂದಿಗೆ ಶಿಂಷಾ ನದಿಗೆ ತೆರಳಿ, ನದಿಯ ದಡದಲ್ಲಿ ಶ್ರೀ ಮದ್ದೂರಮ್ಮನವರಿಗೆ ನೂರೊಂದು ಚಂದ್ರ ಭಂಡಾರ, ಎಡೆಪೂಜೆ, ಹೂ ಹೊಂಬಾಳೆ ಪೂಜೆ, ಕರಗ ಪೂಜೆ ಮಾಡಿಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಮಠಮನೆ ತಲುಪುವುದು.

ಬುಧವಾರ ಬೆಳಗ್ಗೆ 6ಕ್ಕೆ ಶ್ರೀ ಮದ್ದೂರಮ್ಮನ ಕೊಂಡೋತ್ಸವ ನಡೆಯಲಿದೆ. ಸಂಜೆ 4.30 ಕ್ಕೆ ಹೆಣ್ಣುಮಕ್ಕಳಿಂದ ಶ್ರೀ ಮದ್ದೂರಮ್ಮನವರಿಗೆ ಹಾಲರವಿ ಸೇವೆ ಜರುಗಲಿದೆ. ಏ.17ರ ಸಂಜೆ 4 ಗಂಟೆಗೆ ಮಠಮನೆಯಿಂದ ಭಕ್ತರಿಂದ ಬಾಯಿ ಬೀಗ ಸೇವೆ ಸಮೇತ ಶ್ರೀ ಸಿಡಿರಣ್ಣನವರ ಸಿಡಿ ಉತ್ಸವ ನಡೆಯಲಿದೆ.

ಏ.18 ರಂದು ಸಂಜೆ 4 ಗಂಟೆಗೆ ಶ್ರೀ ಮದ್ದೂರಮ್ಮನವರಿಗೆ ಓಕಳಿ ಸೇವೆ, ಸಂಜೆ 6.30 ಗಂಟೆಗೆ ಉಯ್ಯಲೆ ಉತ್ಸವ, ರಾತ್ರಿ 9 ಗಂಟೆಗೆ ಮುತ್ತಿನ ಪಲ್ಲಕ್ಕಿ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net