ಮದರಸಾಗಳಲ್ಲಿ ಕನ್ನಡ, ಇಂಗ್ಲಿಷ್ ಕಲಿಸಲು ಸೂಚನೆ

madarasa
Published on

ಬೆಂಗಳೂರು: ಮದರಸಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ವಿಜ್ಞಾನ, ಗಣಿತ ಕಲಿಸಲು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಮದರಸಗಳಲ್ಲಿ ಪ್ರಮುಖವಾಗಿ ಕನ್ನಡ ಕಡ್ಡಾಯವಾಗಿ ಕಲಿಸಲೇಬೇಕು. ಉಳಿದಂತೆ ಇಂಗ್ಲಿಷ್ ಸೇರಿ ಇತರೆ ಭಾಷೆ ಕಲಿಸಲು ಕ್ರಮ ಕೈಗೊಳ್ಳಿ, ಇದರಿಂದ ಅಲ್ಲಿನ ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಸಿಗಲಿದೆ ಎಂದರು.

ರಾಜ್ಯದಲ್ಲಿ 1265 ವಕ್ಫ್ ಮಂಡಳಿಯಲ್ಲಿ ನೋಂದಣಿ ಯಾದ ಮದರಸಾಗಳಿದ್ದು, ಆ ಪೈಕಿ 100 ಮದರಸಗಳ ಐದು ಸಾವಿರ ಮಕ್ಕಳಿಗೆ ಈ ವರ್ಷದಿಂದಲೇ ಪ್ರಾಯೋಗಿಕವಾಗಿ ಕಲಿಕೆ ಆರಂಭಿಸಿ. ಮುಂದಿನ ವರ್ಷದಿಂದ ಎಲ್ಲ ಮದರಸಗಳಲ್ಲಿ ಆರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಅಲ್ಪಸಂಖ್ಯಾತರ ನಿರ್ದೇಶನಾಲಯ ವ್ಯಾಪ್ತಿಯಡಿ ವಿದೇಶದಲ್ಲಿ ವ್ಯಾಸಂಗ ಮಾಡಲು ನೀಡುವ ಪ್ರೋತ್ಸಾಹ ಧನ ಮೊತ್ತ 20 ಲಕ್ಷ ರೂ.ನಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲು ಹಾಗೂ ಐಐಟಿ, ಎನ್‌ಐಟಿ ಸೇರಿದಂತೆ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಲಿ ನೀಡುತ್ತಿರುವ ಎರಡು ಲಕ್ಷ ರೂ. ಪ್ರೋತ್ಸಾಹ ಧನ ಮೊತ್ತ ನಾಲ್ಕು ಲಕ್ಷ ರೂ. ಗಳಿಗೆ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ಸೂಚಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜು ಮತ್ತು ಮೌಲಾನಾ ಅಜಾದ್ ಮಾದರಿ ಶಾಲೆಗಳ 9,10 ಹಾಗೂ 12ನೇ ತರಗತಿಯ ಒಂದು ಲಕ್ಷ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಸುಧಾರಿಸಲು ಸಿದ್ಧಪಡಿಸಿರುವ ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳ ಕೈಪಿಡಿ ಹಾಗೂ ನಿರ್ದೇಶನಾಲಯದ ಯೋಜನೆಗಳ ಕೈಪಿಡಿಯನ್ನು ಸಚಿವರು ಇದೇ ವೇಳೆ ಬಿಡುಗಡೆಗೊಳಿಸಿದರು.

ವರದಿಗೆ ಸೂಚನೆ

ಕಳೆದ ಎರಡು ವರ್ಷಗಳಲ್ಲಿ ಅಲ್ಪಸಂಖ್ಯಾತ ನಿರ್ದೇಶನಾಲಯ ವತಿಯಿಂದ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಲ್ಪಸಂಖ್ಯಾತರ ಕಾಲೋನಿ ಗಳ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು. ಎಷ್ಟು ಮೊತ್ತದ ಕಾಮಗಾರಿ ಕೈಗೊಳ್ಳಲಾಗಿದೆ, ಎಷ್ಟು ಮೊತ್ತ ಪಾವತಿಗೆ ಬಾಕಿ ಇದೆ, ಕಾಮಗಾರಿ ಪ್ರಮಾಣ, ಗುತ್ತಿಗೆ ದಾರರಿಗೆ ಪಾವತಿಸಿರುವ ಮೊತ್ತ ಕುರಿತು ಸಮಗ್ರ ವರದಿ ನೀಡುವಂತೆ ಸಚಿವರು ಸೂಚಿಸಿದರು.

ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶನಾಲಯ ನಿರ್ದೇಶಕ ಜಿಲಾನಿ ಮೊಕಾಶಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್, ವಕ್ಫ್ ಮಂಡಳಿ ಕಾರ್ಯನಿರ್ವಾಹಕ ಖಾನ್ ಫರ್ವಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net