

ಶಿವಮೊಗ್ಗ: ಹಿಂದು ಕಾರ್ಯಕರ್ತರ ಕಗ್ಗೊಲೆ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಿರುವ ರಾಜ್ಯ ಸರ್ಕಾರ ಸಮಪರ್ಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಚಿತ್ರದುರ್ಗದ ಬಸವಮೂರ್ತಿ ಮದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶಾಸಕ ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ್ದ ಶ್ರೀಗಳು ಈಶ್ವರಪ್ಪ ಕುಟುಂಬದವರನ್ನು ಆಶೀರ್ವದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರವೀಣ್ ನೆಟ್ಟಾರು ಹತ್ಯೆಯ ನಂತರದ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಕಾರ್ಯನಿರ್ವಹಿಸಿದೆ. ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ನಿಬಾಯಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸಮಪರ್ಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮೀಸಲಾತಿಗೆ ಒತ್ತಾಯಿಸಿ ಎಲ್ಲ ಜಾತಿ, ಸಮುದಾಯಗಳು ಸಂಘಟನಾತ್ಮಕವಾಗಿ ಹೋರಾಟ ನಡೆಸುತ್ತಿವೆ. ಈ ವಿಚಾರದಲ್ಲಿ ಸರ್ಕಾರ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕು. ಪರಿಶಿಷ್ಟ ಜಾತಿ ಪಂಗಡಗಳಲ್ಲಿ ತಮ್ಮ ಜಾತಿಯನ್ನು ಸೇರಿಸುವಂತೆ ಹಲವು ಸಮುದಾಯಗಳು ಬೇಡಿಕೆ ಇರಿಸಿವೆ ಸಮುದಾಯದ ಸ್ಥಿತಿಗತಿಗಳ ಆಧಾರದ ಮೇರೆಗೆ ಮೀಸಲಾತಿ ನೀಡಬೇಕೆಂದು ಮಾದಾರ ಚನ್ನಯ್ಯ ಶ್ರೀಗಳು ಹೇಳಿದರು.
ಕೆಲ ನಿಯಮಗಳ ಆಧಾರದ ಮೇರೆಗೆ ಕಾನೂನು ಬದ್ಧವಾಗಿ ಮೀಸಲಾತಿ ನೀಡುವ ಪ್ರಕ್ರಿಯೆ ನಡೆಯುತ್ತದೆ. ಹೀಗಾಗಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ ಅದು ಸಹಜ. ಕೇಳಿದ ಕೂಡಲೇ ಮೀಸಲಾತಿ ನೀಡಬೇಕೆಂಬುದು ಎಲ್ಲರ ಅಭಿಲಾಷೆ. ಆದರೆ ಸರ್ಕಾರ ನೀತಿ ನಿಯಮಗಳ ಆಧಾರದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.