ಬಹುಭಾಷಾ ತಾರೆ ಸಮಂತಾ ರುಥ್ ಪ್ರಭು ಡಬಲ್ ಖುಷಿಯಲ್ಲಿದ್ದಾರೆ. ನಟಿಗೆ ತಾಯಿಯಾಗುತ್ತಿರುವ ಸಂತಸ ಒಂದೆಡೆಯಾದರೆ, ಮತ್ತೊಂದೆಡೆ ಅವರ ನಟನೆಯ ತೆಲುಗಿನ ‘ಮಾ ಇಂಟಿ ಬಂಗಾರಂ’ ಗೆಲುವಿನ ನಗೆ ಬೀರಿದೆ. ಕಳೆದ ಜೂನ್ 19ರಂದು ರಿಲೀಸ್ ಆಗಿದ್ದ ಈ ಮಹಿಳಾ ಪ್ರಧಾನ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಸಮಂತಾ ನಟನೆ, ಆ್ಯಕ್ಷನ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ 50 ಕೋಟಿ ರೂ. ಮಾಡಿದ ಸಂಭ್ರಮದಲ್ಲಿ ಚಿತ್ರತಂಡ ಸಕ್ಸಸ್ ಆಚರಿಸಿತ್ತು. ಇದೀಗ ‘ಮಾ ಇಂಟಿ ಬಂಗಾರಂ’ ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಹೌದು, ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗಿನ ಮಹಿಳಾ ಪ್ರಧಾನ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಆ ಮೂಲಕ ‘ಅರುಂಧತಿ’ ಚಿತ್ರದ ದಾಖಲೆಯನ್ನು ಮುರಿದಿದೆ. ರಿಲೀಸ್ ಆದ 15 ದಿನಕ್ಕೆ ‘ಮಾ ಇಂಟಿ ಬಂಗಾರಂ’ ಸಿನಿಮಾ ವಿಶ್ವಾದ್ಯಂತ 83.12 ಕೋಟಿ ರೂ. ಗಳಿಕೆ ಮಾಡಿದೆ. 209ರಲ್ಲಿ ರಿಲೀಸ್ ಆಗಿದ್ದ ಅನುಷ್ಕಾ ಶೆಟ್ಟಿ ಅಭಿನಯದ ‘ಅರುಂಧತಿ’ ಚಿತ್ರವು ಒಟ್ಟು 70 ಕೋಟಿ ಗಳಿಕೆ ಮಾಡಿತ್ತು. ಇದೀಗ ಈ ಸಿನಿಮಾ ತೆರೆಕಂಡು 19 ವರ್ಷಗಳ ಬಳಿಕ ಆ ದಾಖಲೆಯನ್ನು ಸಮಂತಾ ಪುಡಿ ಮಾಡಿದ್ದಾರೆ. ಸದ್ಯ ‘ಮಾ ಇಂಟಿ ಬಂಗಾರಂ’ 100 ಕೋಟಿಯತ್ತ ದಾಪುಗಾಲಿಡುತ್ತಿದೆ. -ಏಜೆನ್ಸೀಸ್