ಬಹುಭಾಷಾ ತಾರೆ ಸಮಂತಾ ರುಥ್ ಪ್ರಭು ತೆಲುಗಿನ ‘ಖುಷಿ’ ಬಳಿಕ ಪೂರ್ಣ ಪ್ರಮಾಣದ ನಾಯಕಿಯಾಗಿ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ರಿಲೀಸ್ ಆಗಿದ್ದ ‘ಶುಭಂ’ನಲ್ಲಿ ಅವರದು ಅತಿಥಿ ಪಾತ್ರವಾಗಿತ್ತು. ಇನ್ನು ‘ಸಿಟಡೆಲ್: ಹನಿ ಬನ್ನಿ’ ವೆಬ್‌ಸರಣಿ ಒಟಿಟಿಗೆ ಸೀಮಿತವಾಗಿದೆ. ಹೀಗಾಗಿ, ಅಭಿಮಾನಿಗಳು ಸಮಂತಾರನ್ನು ಮತ್ತೆ ಬಿಗ್ ಸ್ಕ್ರೀನ್ ಮೇಲೆ ನೋಡಲು ಕಾತುರರಾಗಿದ್ದಾರೆ. ಅಂತಹ ಅಭಿಮಾನಿಗಳಿಗೆ ಸಮಂತಾ ಸಿಹಿ ಸುದ್ದಿ ನೀಡಿದ್ದು, ಅವರು ನಾಯಕಿಯಾಗಿ ನಟಿಸಿರುವ ‘ಮಾ ಇಂಟಿ ಬಂಗಾರಂ’ ಇದೇ ಜೂ.19ಕ್ಕೆ ರಿಲೀಸ್ ಆಗಲಿದೆ. ‘ಓ ಬೇಬಿ’ ಬಳಿಕ ನಿರ್ದೇಶಕಿ ನಂದಿನಿ ರೆಡ್ಡಿ- ಸಮಂತಾ ಈ ಚಿತ್ರದ ಮೂಲಕ ಒಂದಾಗಿದ್ದು, ಹೀಗಾಗಿ ನಿರೀಕ್ಷೆ ಹೆಚ್ಚಿಸಿದೆ. ಇನ್ನೇನು ಬಿಡುಗಡೆ ಹಾದಿಯಲ್ಲಿರುವಾಗಲೇ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಸಮಂತಾ ಎರಡು ವಿಭಿನ್ನ ಅವತಾರಗಳಲ್ಲಿ ಮಿಂಚಿದ್ದಾರೆ. 3.05 ನಿಮಿಷದ ಟ್ರೇಲರ್‌ನಲ್ಲಿ ಮೊದಲಿಗೆ ಸಮಂತಾ ಮನೆಯ ವಾತಾವರಣ ಹಾಗೂ ಕಟ್ಟುಪಾಡುಗಳಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿರುವ ಸಂಪ್ರದಾಯಸ್ಥ ಮನೆತನದ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಅನಂತರ ಒಮ್ಮಿಂದೊಮ್ಮೆಲೆ ಆ್ಯಕ್ಷನ್ ಅವತಾರ ತಾಳಿ, ಭರ್ಜರಿ ಸಾಹಸಗಳ ಮೂಲಕ ಗಮನ ಸೆಳೆಯುತ್ತಾರೆ. ಸಮಂತಾ ಪತಿಯಾಗಿ ಕನ್ನಡದ ದಿಗಂತ್ ಮಂಚಾಲೆ ಅಭಿನಯಿಸಿದ್ದಾರೆ. ಹಾಗೆಯೇ ಜಮೀನ್ದಾರನಾಗಿ ‘ಕಾಂತಾರ’ ಖ್ಯಾತಿಯ ಗುಲ್ಶನ್ ದೇವಯ್ಯ ಕಾಣಿಸಿಕೊಂಡಿರುವುದು ವಿಶೇಷ. -ಏಜೆನ್ಸೀಸ್