VIDEO| ವೈರಲ್​ ಆಗುವ ಭರದಲ್ಲಿ ಅಪಾಯಕಾರಿ ಸ್ಟಂಟ್​; ಸವಾರಿನಿಗೆ ಬಿಸಿ ಮುಟ್ಟಿಸಿದ ಪೊಲೀಸರು

Bullet Stunt
Published on

ಲಖನೌ: ಪ್ರಚಾರದ ಹುಚ್ಚಿಗೆ ಬಿದ್ದು ರೀಲ್ಸ್​ ಮಾಡುವುದು, ಅದಕ್ಕಾಗಿ ಪ್ರಾಣ ಪಣಕ್ಕಿಡುವುದು, ಇನ್ನೊಬ್ಬರ ಪ್ರಾಣ, ಆಸ್ತಿಗೆ ಹಾನಿಯುಂಟು ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹೀಗೆ ರೀಲ್​ ಮಾಡುವವರ ಹಿಂದೆ ಕಾನೂನು ಹಿಂಬಾಲಿಸುತ್ತದೆ ಎಂಬ ಅರಿವು ಅಂತಹವರಿಗೆ ಇರುವುದಿಲ್ಲ.

ಇದೀಗ ಯುವಕನೊಬ್ಬ ಬೈಕ್​ನಲ್ಲಿ ಅಪಾಯಕಾರಿ ಸ್ಟಂಟ್​ಗಳನ್ನು ಪ್ರದರ್ಶಿಸಿ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ರಾಯಲ್​ ಎನ್​ಫೀಲ್ಡ್​ ಬುಲೆಟ್​ ಬೈಕ್​ ಓಡಿಸುತ್ತಿರುವ ಯುವಕ ಕೈಯಲ್ಲಿ ಗನ್​ ಹಿಡಿದು ಅಪಾಯಕಾರಿ ಸ್ಟಂಟ್​ಗಳನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದಲ್ಲದೆ ಕೈಯಲ್ಲಿ ಗನ್​ ಹಿಡಿದು ಗಾಇಡ ಓಡಿಸುವ ವೇಳೆ ಪೋಸ್​ ನೀಡಿದ್ದು, ಗಾಡಿಯ ನಂಬರ್​ ಪ್ಲೇಟ್​ ಬದಲಿಗೆ ಮಹಾಕಾಲ್​ ಎಂಬ ಬೋರ್ಡ್​ಅನ್ನು ನೇತು ಹಾಕಿರುವುದನ್ನು ಕಾಣಬಹುದಾಗಿದೆ.

ಇತ್ತ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಕ್ರಮ ಕೈಗೊಂಡಿರುವ ಪೊಲೀಸರು ಅಪಾಯಕಾರಿ ಸ್ಟಂಟ್​ ಪ್ರದರ್ಶಿಸಿದ ಯುವಕ ಹಾಗೂ ಬೈಕ್​ಅನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಯುವಕ ಹಾಗೂ ಸ್ಟಂಟ್​ ಮಾಡಲು ಬಳಸಿದ್ದ ಬೈಕ್​ಅನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net