ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು 3ನೇ ತರಗತಿ ಬಾಲಕಿ ಸಾವು

student heart attack
Published on

ಲಕ್ನೋ:  ಶಾಲೆಯಲ್ಲಿ ಆಟವಾಡುತ್ತಿದ್ದ ಮೂರನೇ ತರಗತಿ ವಿದ್ಯಾರ್ಥಿ ಆಟದ ಮೈದಾನದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಈ ಘಟನೆ ಲಕ್ನೋದಲ್ಲಿ ನಡೆದಿದೆ. 

ಮಾನ್ವಿ ಸಿಂಗ್ (9) ಮೃತ ವಿದ್ಯಾರ್ಥಿನಿ. ಉತ್ತರ ಪ್ರದೇಶದ ಲಕ್ನೋದ ಮಾಂಟ್‌ಫೋರ್ಟ್ ಶಾಲೆಯ ಒಂಬತ್ತು ವರ್ಷದ ವಿದ್ಯಾರ್ಥಿನಿ. ಶಾಲಾ ಮೈದಾನದಲ್ಲಿ ಕುಸಿದು ಬಿದ್ದ ಬಾಲಕಿಯನ್ನು ಕೂಡಲೇ  ಆಸ್ಪತ್ರೆಗೆ ಸಾಗಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. 

ಮಾನ್ವಿ ಸಿಂಗ್  ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಆಟದ ಮೈದಾನದಲ್ಲಿ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂಬ ಮಾಹಿತಿ ಪಡೆದ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿನಿಯನ್ನು ಸಮೀಪದ ಫಾತಿಮಾ ಆಸ್ಪತ್ರೆಗೆ ಸಾಗಿಸಿದರು. ಬಾಲಕಿಯ ಕುಟುಂಬಸ್ಥರು ಅಲ್ಲಿಗೆ ಬಂದು ಚಂದನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಖಚಿತಪಡಿಸಿದ್ದಾರೆ.

ಬಾಲಕಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಾಲಕಿಯ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಬಾಲಕಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶನಿವಾರ ಶಾಲೆಗೆ ರಜೆ ಘೋಷಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ. 

ಬಾಲಕಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಹಾನಗರ ಎಸ್‌ಎಚ್‌ಒ ಅಖಿಲೇಶ್ ಮಿಶ್ರಾ ತಿಳಿಸಿದ್ದಾರೆ. ಆದರೆ ಬಾಲಕಿ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net