

ಗುಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಆರಂಭದಲ್ಲಿ ಮಳೆ ಅಡ್ಡಿಯಾಗಿತ್ತು. ಇದೀಗ ಮಳೆ ನಿಂತ ಬೆನ್ನಲ್ಲೇ ಪಂದ್ಯ ಪ್ರಾರಂಭಗೊಂಡಿದೆ. ಅಪಾರ ಸಂಖ್ಯೆಯಲ್ಲಿ ಮ್ಯಾಚ್ ನೋಡಲು ಬಂದಿರುವ ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿದ್ದು, ಯಾರು ಫೈನಲ್ ತಲುಪಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಇನ್ನು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್, ಬ್ಯಾಟ್ ಮಾಡುವಂತೆ ಭಾರತಕ್ಕೆ ಆಹ್ವಾನಿಸಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಬಾರಿ ಒಂದಲ್ಲ ಒಂದು ವಿಚಾರಗಳಿಂದ ತೀವ್ರ ಚರ್ಚೆಗೆ ಅಥವಾ ಟೀಕೆಗೆ ಗುರಿಯಾಗುವ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ಮುನ್ನೆಲೆಗೆ ಬಂದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ ರಾಯುಡು, ಈ ಮ್ಯಾಚ್ನಲ್ಲಿ ಅದೃಷ್ಟ ಭಾರತ ಕಡೆಯಿದೆ. ಹಾಗಾಗಿ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ಸುಲಭ ಗೆಲುವು ದಾಖಲಿಸಿದೆ ಎಂದಿದ್ದಾರೆ.
"ಭಾರತ ತಂಡದ ಆಟಗಾರರು ತಾಳ್ಮೆಯಿಂದ ಸನ್ನದ್ಧರಾಗಿದ್ದಾರೆ. ಪಂದ್ಯಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಈಗಾಗಲೇ ಮಾಡಿಕೊಂಡಿದೆ. ಕ್ಯಾಪ್ಟನ್ ಆಗಿ ರೋಹಿತ್ ಉತ್ತಮ ಪಾತ್ರ ನಿರ್ವಹಿಸುತ್ತಿದ್ದು, ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ. ಬ್ರ್ಯಾಂಡ್ ಕ್ರಿಕೆಟ್ ಜತೆ ಅದೃಷ್ಟ ಕೂಡ ಸಾಥ್ ಕೊಡಲಿದೆ" ಎಂದು ಹೇಳಿದ್ದಾರೆ.
ಸದ್ಯ ಟೀಮ್ ಇಂಡಿಯಾ ಪರ ಅಂಬಟಿ ರಾಯುಡು ನುಡಿದಿರುವ ಮಾತುಗಳು ನಿಜವಾಗಲೆಂದು ಅಭಿಮಾನಿಗಳು ಆಶಿಸಿದ್ದು, ಫೈನಲ್ ಹಣಾಹಣಿಯಲ್ಲಿ ಭಾರತವನ್ನು ನೋಡುವ ಹಂಬಲ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).