ಕಾರಜೋಳಗೆ ಅದೃಷ್ಟ ಚೆನ್ನಾಗಿದೆ, ಅವರು ಸಿಎಂ ಆದ್ರೆ ನಮ್ಮದೇನೂ ಅಭ್ಯಂತರವಿಲ್ಲ...

govinda karajola
Published on

ವಿಜಯಪುರ: 'ಡಿಸಿಎಂ ಗೋವಿಂದ ಕಾರಜೋಳರಿಗೆ ಅದೃಷ್ಟ ಚೆನ್ನಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ... ಅದರಲ್ಲೂ ಇದೇ ಅವಧಿಯಲ್ಲಾದರೂ ಅಭ್ಯಂತರವಿಲ್ಲ' ಎನ್ನುವ ಮೂಲಕ ಕಾಂಗ್ರೆಸ್ ಶಾಸಕರಿಬ್ಬರು ಕಾರಜೋಳರ ಕಾಲೆಳೆದರು.

ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಕೆರೆಗೆ ಬಾಗಿನ ಸಮರ್ಪಣೆ ಹಾಗೂ ಸ್ಥಳೀಯ ಪ್ರಾಥಮಿಕ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶಿವಾನಂದ ಪಾಟೀಲ ಮತ್ತು ಎಂ.ಬಿ. ಪಾಟೀಲ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.

‘ಕಾರಜೋಳ ಸಾಹೇಬ್ರೇ ನೀವೇ ಮುಖ್ಯಮಂತ್ರಿಯಾದರೂ ಅಭ್ಯಂತರವಿಲ್ಲ, ನನ್ನ ಹಾಗೂ ಎಂ.ಬಿ. ಪಾಟೀಲರಿಗಿಂತ ನಿಮಗೆ ಅದೃಷ್ಟ ಚೆನ್ನಾಗಿದೆ' ಎಂದ ಶಾಸಕ ಶಿವಾನಂದ ಪಾಟೀಲ, 'ರೈತರಿಗೆ ವೈಜ್ಞಾನಿಕ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಒತ್ತಾಯಿಸಿ' ಎಂದು ಡಿಸಿಎಂ ಕಾರಜೋಳಗೆ ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಎಂ.ಬಿ.ಪಾಟೀಲ್​, ‘ಇದೇ ಅವಧಿಯಲ್ಲಾದರೂ ನಮ್ಮ ಅಭ್ಯಂತರವಿಲ್ಲ’ ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಮತ್ತೆ ನಗುತ್ತಲೇ ಮಾತನಾಡಿದ ಮಾಜಿ ಸಚಿವ ಶಿವಾನಂದ ಪಾಟೀಲ್, ‘ನೋಡಿ ಎಂ.ಬಿ. ಪಾಟೀಲರು ಇದೇ ಅವಧಿಯಲ್ಲಿ ಕಾರಜೋಳರು ಮುಖ್ಯಮಂತ್ರಿಯಾಗಲಿ ಎಂದು ಹೇಳುವ ಮೂಲಕ ಅವರಿಗೂ ಹಾಗೂ ಯಡಿಯೂರಪ್ಪನವರಿಗೆ ಜಗಳ ಹಚ್ಚುತ್ತಿದ್ದಾರೆ’ ಎಂದು ಹಾಸ್ಯಭರಿತವಾಗಿ ನುಡಿದರು.

ಡಿಸಿಎಂ ಗೋವಿಂದ ಕಾರಜೋಳ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಡಿಸಿಸಿ ಬ್ಯಾಂಕ್ ಹಿರಿಯ ಅಧಿಕಾರಿ ಸತೀಶ ಪಾಟೀಲ್​, ಡಾ.ಎಂ.ಎಚ್. ಹತ್ತೂರಕರ, ಆರ್.ಎಸ್. ಕಸಬೇಗೌಡರ, ವೀಣಾ ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net