

ಬೆಂಗಳೂರು: ಶ್ರೀಲಂಕಾ ಪ್ರಜೆಗಳನ್ನು ಅಕ್ರಮವಾಗಿ ರಾಜ್ಯಕ್ಕೆ ಕರೆಸಿಕೊಂಡಿದ್ದ ಎಲ್‌ಟಿಟಿಇ ಶಂಕಿತ ಉಗ್ರ ಮೊಹಮ್ಮದ್ ಇಮ್ರಾನ್ ಖಾನ್ ಅಲಿಯಾಸ್ ಹಾಜ ನಜಾರ್ಬಿಡೇನ್(೩೯) ಎಂಬಾತನನ್ನು ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಶಂಕಿತ ಉಗ್ರ ಎಲ್‌ಟಿಟಿಐ ಸಕ್ರಿಯ ಸದಸ್ಯನಾಗಿದ್ದು, ೨೦೨೧ರ ಜೂನ್ ೬ರಲ್ಲಿ ಶ್ರೀಲಂಕಾದ ೩೮ ಮಂದಿ ಪ್ರಜೆಗಳನ್ನು ಹಡಗಿನ ಮೂಲಕ ತಮಿಳುನಾಡಿಗೆ, ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿನ ವಿವಿಧೆಡೆ ಕಳುಹಿಸಿದ್ದ. ಆ ಬಳಿಕ ಹಡಗಿನಲ್ಲಿ ಕೆನಡಾಕ್ಕೆ ಕಳುಹಿಸಲು ಸಿದ್ದತೆ ನಡೆಸಿದ್ದ. ಅಷ್ಟರಲ್ಲಿ ಮಂಗಳೂರು ದಕ್ಷಿಣ ವಿಭಾಗ ಪೊಲೀಸರ ಗುಪ್ತಚರ ಮಾಹಿತಿ ಆಧರಿಸಿ ಮಂಗಳೂರಿನ ಖಾಸಗಿ ಸ್ಥಳಗಳಲ್ಲಿ ತಂಗಿದ್ದ ೩೮ ಮಂದಿ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಅಕ್ರಮವಾಗಿ ಬಂದಿರುವುದು ಪತ್ತೆಯಾಗಿತ್ತು. ಹೀಗಾಗಿ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡು, ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಆ ಬಳಿಕ ಎನ್‌ಐಎ ಕಾರ್ಯಾಚರಣೆ ನಡೆಸಿ ತಮಿಳುನಾಡಿನ ದಿನಕರನ್ ಅಲಿಯಾಸ್ ಅಯ್ಯ, ಕಾಸಿ ವಿಶ್ವನಾಥನ್, ರೆಸೂಲ್, ಸತಮ್ ಉಷೇನ್, ಅಬ್ದುಲ್ ಮುಹೀತ್‌ನನ್ನು ಬಂಧಿಸಿ, ೨೦೨೧ರಲ್ಲಿ ಕೋರ್ಟ್‌ಗೆ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಕೂಡ ಸಲ್ಲಿಸಿತ್ತು. ಆದರೆ, ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಇಮ್ರಾನ್ ಖಾನ್‌ಗಾಗಿ ನಿರಂತರ ಶೋಧ ನಡೆಸಿತ್ತು. ಇದೀಗ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಇಮ್ರಾನ್ ಇಲ್ಲಿನ ವೋಟರ್ ಐಡಿ ಮಾಡಿಸಿಕೊಂಡಿದ್ದ
ಮೊಹಮ್ಮದ್ ಇಮ್ರಾನ್ ಖಾನ್ ಶ್ರೀಲಂಕಾ ಪ್ರಜೆಯಾಗಿದ್ದು, ೮-೧೦ ವರ್ಷಗಳ ಹಿಂದೆಯೇ ತಮಿಳುನಾಡಿಗೆ ಬಂದು, ಇಲ್ಲಿಯೇ ವಾಸವಾಗಿದ್ದಾನೆ. ಅಲ್ಲದೆ, ಇಲ್ಲಿನ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಕೂಡ ಮಾಡಿಸಿಕೊಂಡಿದ್ದ. ಇದರೊಂದಿಗೆ ಶ್ರೀಲಂಕಾದ ಎಲ್‌ಟಿಟಿಇ ಸಂಘಟನೆ ಸದಸ್ಯರ ಜತೆ ನಿರಂತರ ಸಂಪರ್ಕ ಹೊಂದಿದ್ದು, ಅವರ ಸೂಚನೆ ಮೇರೆಗೆ ದಕ್ಷಿಣ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಜತೆಗೆ ಶ್ರೀಲಂಕಾ ಪ್ರಜೆಗಳನ್ನು ಅಕ್ರಮವಾಗಿ ಭಾರತಕ್ಕೆ ಕರೆಸಿಕೊಳ್ಳುತ್ತಿದ್ದ. ಅಲ್ಲದೆ, ಬೇರೆ ಬೇರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಹಲವಾರು ತನಿಖಾ ಸಂಸ್ಥೆಗಳ ಮೋಸ್ಟ್ ವಾಟೆಂಡ್ ಆಗಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
ಮೋಸ್ಟ್ ವಾಟೆಂಡ್ ಜತೆ ಸಂಪರ್ಕ
ಪ್ರಕರಣದ ಮತ್ತೊಬ್ಬ ಮೋಸ್ಟ್ ವಾಟೆಂಡ್, ಎಲ್‌ಟಿಟಿಇ ಉಗ್ರ ಹಸನ್‌ನ ಆಪ್ತನಾಗಿರುವ ಮೊಹಮ್ಮದ್ ಇಮ್ರಾನ್ ಖಾನ್, ಆತನ ಸೂಚನೆ ಮೇರೆಗೆ ೨೦೨೧ರಲ್ಲಿ ೩೮ ಮಂದಿ ಶ್ರೀಲಂಕಾ ಪ್ರಜೆಗಳನ್ನು ತಮಿಳುನಾಡಿನ ವಿವಿಧೆಡೆ ಅಕ್ರಮವಾಗಿ ಕರೆಸಿಕೊಂಡಿದ್ದ. ಈ ವಿದೇಶಿಗರಿಗೆ ಕೆನಡಾಕ್ಕೆ ವಲಸೆ ಹೋಗಲು ಬೇಕಾದ ಕಾನೂನುಬದ್ಧ ದಾಖಲಾತಿಗಳು ಕಲ್ಪಿಸಿ ಉದ್ಯೋಗ ಒದಗಿಸುವ ಸುಳ್ಳು ಭರವಸೆಗಳನ್ನು ನೀಡಲಾಗಿತ್ತು. ಆದರೆ, ಇದ್ಯಾವುದು ನೀಡದೆ ಬೆಂಗಳೂರು ಮಾರ್ಗವಾಗಿ ಮಂಗಳೂರಿನ ವಿವಿಧೆಡೆ ಕಳುಹಿಸಿ ವಂಚಿಸಿದ್ದ. ಅಲ್ಲದೆ, ಮೊಹಮ್ಮದ್ ಇಮ್ರಾನ್ ಖಾನ್, ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಣೆ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದಾನೆ. ಪ್ರಮುಖವಾಗಿ ಶ್ರೀಲಾಂಕಾ ಪ್ರಜೆಗಳನ್ನು ಭಾರತ ಮತ್ತು ಇತರೆ ದೇಶಗಳಿಗೆ ಕಳುಹಿಸುವ ದಂಧೆಯಲ್ಲಿ ಸಕ್ರಿಯವಾಗಿದ್ದಾನೆ ಎಂಬುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.