ಶೀಘ್ರವೇ ಎಲ್​ಪಿಜಿ ಪೋರ್ಟಬಿಲಿಟಿ

LPG
Published on

ನವದೆಹಲಿ: ನಿಮ್ಮ ಎಲ್​ಪಿಜಿ ಪೂರೈಕೆದಾರರ ಸೇವೆ ಬಗ್ಗೆ ನಿಮಗೆ ತೃಪ್ತಿಯಿಲ್ಲವೇ? ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರೆಯುವ ಸಾಧ್ಯತೆ ಇದೆ. ಮೊಬೈಲ್ ಸಂಖ್ಯೆಯ ಪೋರ್ಟಬಿಲಿಟಿಯ ಹಾಗೆ ಅಡುಗೆ ಅನಿಲ ಗ್ರಾಹಕರು ಕೂಡ ತಮ್ಮ ಸಿಲಿಂಡರ್ ಪೂರೈಕೆದಾರ ಕಂಪನಿಯನ್ನು ಬದಲಿಸಲು ಅವಕಾಶ ಸಿಗಲಿದೆ. ಎಲ್​ಪಿಜಿ ಇಂಟರ್​ಆಪರೇಬಿಲಿಟಿ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್​ಜಿಆರ್​ಬಿ) ಗ್ರಾಹಕರಿಂದ ಅಕ್ಟೋಬರ್ ಮಧ್ಯಭಾಗದಲ್ಲಿ ಅಭಿಪ್ರಾಯಗಳನ್ನು ಆಹ್ವಾನಿಸಲಿದೆ.

ಜನರ ಅಭಿಪ್ರಾಯಗಳು ಬಂದ ನಂತರ, ಎಲ್​ಪಿಜಿ ಪೋರ್ಟಬಿಲಿಟಿಗೆ ನಿಯಮಗಳನ್ನು ರೂಪಿಸಿ, ದೇಶದಾದ್ಯಂತ ಜಾರಿಗೆ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಪಿಎನ್​ಜಿಆರ್​ಬಿ ತಿಳಿಸಿದೆ. 2013ರಲ್ಲಿ ಯುಪಿಎ ಸರ್ಕಾರ 13 ರಾಜ್ಯಗಳ 24 ಜಿಲ್ಲೆಗಳಲ್ಲಿ ಎಲ್​ಪಿಜಿ ಪೋರ್ಟಬಿಲಿಟಿಯನ್ನು ಪೈಲಟ್ ಯೋಜನೆಯಾಗಿ ಪ್ರಾರಂಭಿಸಿತ್ತು. 2014ರ ಜನವರಿಯಲ್ಲಿ ಇದನ್ನು 480 ಜಿಲ್ಲೆಗಳಿಗೆ ವಿಸ್ತರಿಸಿತ್ತು. ಆದರೆ, ಗ್ರಾಹಕರಿಗೆ ಆಗ ಕೇವಲ ವಿತರಕರನ್ನು ಮಾತ್ರ ಬದಲಾಯಿಸಲು ಅವಕಾಶವಿತ್ತು, ತೈಲ ಕಂಪನಿಯನ್ನು ಬದಲಿಸಲು ಅವಕಾಶ ಇರಲಿಲ್ಲ. ಈಗ ಪಿಎನ್​ಜಿಆರ್​ಬಿ ಕಂಪನಿಗಳ ಪೋರ್ಟಬಿಲಿಟಿಗೆ ಅನುಮತಿ ನೀಡಲು ಮುಂದಾಗಿದೆ. ಭಾರತದಲ್ಲಿ 32 ಕೋಟಿಗೂ ಹೆಚ್ಚು ಎಲ್​ಪಿಜಿ ಸಂಪರ್ಕಗಳಿವೆ. ವಾರ್ಷಿಕ 17 ಲಕ್ಷಕ್ಕೂ ಹೆಚ್ಚು ಗ್ರಾಹಕರ ದೂರುಗಳು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net