ರೇಷನ್ ಅಂಗಡಿಯಲ್ಲಿ ಎಲ್​ಪಿಜಿ ಸಿಲಿಂಡರ್

LPG Cooking GAs
Published on

ನವದೆಹಲಿ: ನ್ಯಾಯಬೆಲೆ ಅಂಗಡಿಗಳ ಮೂಲಕ ಎಲ್​ಪಿಜಿಯ ಸಣ್ಣ ಸಿಲಿಂಡರ್​ಗಳ ಚಿಲ್ಲರೆ ಮಾರಾಟಕ್ಕೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸುವುದಕ್ಕೆ ಚಿಂತನೆ ನಡೆಸಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ನ್ಯಾಯಬೆಲೆ ಅಂಗಡಿಗಳ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಹಣಕಾಸು ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಅಂಶವೂ ಪ್ರಸ್ತಾವನೆಯಲ್ಲಿ ಇದೆ.

ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸರ್ಕಾರಗಳ ಜತೆಗಿನ ವರ್ಚುವಲ್ ಸಭೆಯಲ್ಲಿ ಈ ವಿಚಾರಗಳು ಪ್ರಸ್ತಾಪವಾಗಿವೆ. ಸಭೆಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇಂಡಿಯನ್ ಆಯಿಲ್ ಕಾರ್ಪೆರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೆರೇಷನ್ ಲಿಮಿಟೆಡ್, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೆರೇಷನ್ ಲಿಮಿಟೆಡ್, ಎಸ್​ಎಸ್​ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್​ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ನ್ಯಾಯಬೆಲೆ ಅಂಗಡಿಗಳ ಹಣಕಾಸಿನ ಸ್ಥಿತಿ ಸುಧಾರಿಸುವ ಸಲುವಾಗಿ ಕೆಲವೊಂದು ಕ್ರಮಗಳು ಅನಿವಾರ್ಯ. ಇದೇ ಕಾರಣಕ್ಕೆ ಎಲ್​ಪಿಜಿ ಸಣ್ಣ ಸಿಲಿಂಡರ್ ಪೂರೈಕೆಗೆ ಈ ಜಾಲವನ್ನು ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಗ್ರಾಹಕರಿಗೆ ಅಡುಗೆ ಅನಿಲದ ಕೊರತೆ ಕಾಡದಂತೆ ನೋಡಿಕೊಳ್ಳುವುದು ಸಾಧ್ಯವಿದೆ. ಇದರ ಜತೆಗೆ ನ್ಯಾಯಬೆಲೆ ಅಂಗಡಿಗಳಿಗೂ ವಹಿವಾಟಿನ ಫಲ ದೊರೆಯಲಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಸರ್ಕಾರದ ಈ ಪ್ರಸ್ತಾವನೆಯನ್ನು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಸ್ವಾಗತಿಸಿವೆ.

ಹಣಕಾಸು ಸೇವೆ

ಹಣಕಾಸು ಸೇವಾ ವಿಭಾಗ ಕೂಡ ರೇಷನ್ ಶಾಪ್​ಗಳಿಗೆ ಹಣಕಾಸಿನ ಸೇವೆ ಒದಗಿಸುವುದಕ್ಕೆ ಅಗತ್ಯ ಸೌಲಭ್ಯ ನೀಡಲು ಒಲವು ತೋರಿಸಿದೆ. ಮುದ್ರಾ ಸಾಲವನ್ನು ರೇಷನ್ ಅಂಗಡಿ ಮಾಲೀಕರಿಗೆ ಒದಗಿಸುವ ಮೂಲಕ ವ್ಯಾಪಾರ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ದೇಶದಲ್ಲಿ ಒಟ್ಟು 5.26 ಲಕ್ಷದಷ್ಟು ನ್ಯಾಯಬೆಲೆ ಅಂಗಡಿಗಳು ವಹಿವಾಟು ನಡೆಸುತ್ತಿವೆ. ಅವುಗಳಿಗೆ ಈ ಪ್ರಸ್ತಾವನೆ ಪ್ರಯೋಜನವನ್ನು ಒದಗಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net