

ಬೆಂಗಳೂರು: ಸುಪಾರಿ ನೀಡಿ ಮಾಜಿ ಪ್ರಿಯಕರನ ಮೊಬೈಲ್ ಸುಲಿಗೆ ಮಾಡಿಸಿದ್ದ ಯುವತಿ ಸೇರಿ ಐವರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಹಾಗೂ ಕೊಡತಿ ನಿವಾಸಿ ಪಿ.ಶೃತಿ(೨೯), ಸುಪಾರಿ ಪಡೆದುಕೊಂಡಿದ್ದ ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಮನೋಜ್ ಕುಮಾರ್(೨೫), ಸುರೇಶ್ ಕುಮಾರ್(೨೬), ಹೊನ್ನಪ್ಪ(೨೫) ಹಾಗೂ ವೆಂಕಟೇಶ್(೨೭) ಬಂಧಿತರು. ಸಿಗಸಂದ್ರದ ಎಇಸಿಎಸ್ ಲೇಔಟ್ ನಿವಾಸಿ ದೂಂಪಾ ವಂಶಿಕೃಷ್ಣ ರೆಡ್ಡಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾ ಮೂಲದ ವಂಶಿಕೃಷ್ಣ ರೆಡ್ಡಿ ಮತ್ತು ಆರೋಪಿ ಶೃತಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳು. ನಗರದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಪರಸ್ಪರ ಪರಿಚಿತರಾಗಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬದವರ ಅನುಮತಿ ಪಡೆದು ಮದುವೆಯಾಗಲು ನಿರ್ಧರಿಸಿದ್ದರು. ಈ ನಡುವೆ ಶೃತಿ ತನಗೆ ಕೆಲ ವರ್ಷಗಳ ಹಿಂದೆ ಬೇರೊಬ್ಬ ಯುವಕನ ಜತೆಗೆ ಸಂಬಂಧ ಇದ್ದ ವಿಚಾರವನ್ನು ಹೇಳಿಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡ ವಂಶಿಕೃಷ್ಣ, ಶೃತಿಯನ್ನು ಮದುವೆಯಾಗಲು ನಿರಾಕರಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ಕೆಲ ತಿಂಗಳಿಂದ ದೂರವಾಗಿದ್ದರು.
ಮೊಬೈಲ್ ಸುಲಿಗೆಗೆ ಸುಪಾರಿ:
ಮಾಜಿ ಪ್ರಿಯಕರ ವಂಶಿಕೃಷ್ಣ ಮೊಬೈಲ್‌ನಲ್ಲಿ ತನ್ನ ಖಾಸಗಿ ವಿಡಿಯೋಗಳು ಹಾಗೂ ಫೋಟೋಗಳು ಇರುವ ಬಗ್ಗೆ ಅನುಮಾನಗೊಂಡಿದ್ದ ಶೃತಿ, ಅದರಿಂದ ಮುಂದೆ ತೊಂದರೆಯಾಗಲಿದೆ ಎಂದು ಭಾವಿಸಿದ್ದಳು. ಹೇಗಾದರೂ ಮಾಡಿ ಆತನ ಮೊಬೈಲ್ ಪಡೆದು ಪರಿಶೀಲಿಸಲು ಆಲೋಚಿಸಿದ್ದಳು. ಸಿನಿಮೀಯ ಶೈಲಿಯಲ್ಲಿ ವಂಶಿಕೃಷ್ಣನ ಮೊಬೈಲ್ ಸುಲಿಗೆ ಮಾಡಿಸಲು ಯೋಜನೆ ರೂಪಿಸಿದ್ದಳು. ಇದಕ್ಕಾಗಿ ತನಗೆ ಪರಿಚಯವಿದ್ದ ಆರೋಪಿ ಮನೋಜ್ ಕುಮಾರ್‌ನನ್ನು ಸಂಪರ್ಕಿಸಿ, ವಂಶಿಕೃಷ್ಣನ ಮೊಬೈಲ್ ಸುಲಿಗೆ ಮಾಡಲು ೧.೧೫ ಲಕ್ಷ ರೂ.ಗೆ ಸುಪಾರಿ ನೀಡಿದ್ದಳು. ಅದರಂತೆ ಮನೋಜ್ ಹಾಗೂ ಆತನ ಮೂವರು ಸ್ನೇಹಿತರು ಗ್ಯಾಂಗ್ ಕಟ್ಟಿಕೊಂಡು ಮೊಬೈಲ್ ಸುಲಿಗೆಗೆ ಯೋಜನೆ ರೂಪಿಸಿದ್ದರು.
ಪೂರ್ವ ಸಂಚಿನಂತೆ ಆರೋಪಿ ಶೃತಿ, ಸೆ.೨೦ರಂದು ವಂಶಿಕೃಷ್ಣನ ಸಂಪರ್ಕಿಸಿ ಮಾತನಾಡಲು ಭೋಗನಹಳ್ಳಿಯ ಗುರು ಸ್ಪೋರ್ಟ್ಸ್ ಸಮೀಪದ ಪಾರ್ಕಿಂಗ್ ಸ್ಥಳಕ್ಕೆ ಬರುವಂತೆ ಕರೆದಿದ್ದಳು. ಅದರಂತೆ ಅಂದು ಸಂಜೆ ವಂಶಿಕೃಷ್ಣ ಮತ್ತು ಶೃತಿ ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ರಾತ್ರಿ ೮.೧೫ಕ್ಕೆ ಮನೆಗೆ ತೆರಳಲು ಇಬ್ಬರು ದ್ವಿಚಕ್ರ ವಾಹನ ಏರಿ ಹೊಟ್ಟಿದ್ದಾರೆ. ಗುರು ಸ್ಪೋರ್ಟ್ಸ್ ಸಮೀಪದ ವೈ ಜಂಕ್ಷನ್‌ನಲ್ಲಿ ಹೋಗುವಾಗ, ಹಿಂದಿನಿಂದ ಬಂದ ಬಿಳಿ ಬಣ್ಣದ ಕಾರೊಂದು ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಬಳಿಕ ಇಬ್ಬರು ಅಪರಿಚಿತರು ಕಾರಿನಿಂದ ಕೆಳಗೆ ಇಳಿದು ವಂಶಿಕೃಷ್ಣನ ಮೇಲೆ ಹಲ್ಲೆ ಮಾಡಿ, ಮೊಬೈಲ್ ಕಿತ್ತುಕೊಂಡಿದ್ದಾರೆ. ಅಂತೆಯೆ ಶೃತಿಯ ಮೊಬೈಲ್ ಸಹ ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಘಟನೆ ಬಳಿಕ ಶೃತಿ, ಬೆಂಗಳೂರಿನಲ್ಲಿ ಈ ರೀತಿ ಘಟನೆಗಳು ಸಾಮಾನ್ಯ, ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ನೀಡುವುದು ಬೇಡ ಎಂದು ವಂಶಿಕೃಷ್ಣಗೆ ಹೇಳಿದ್ದಾಳೆ. ಆದರೂ ವಂಶಿಕೃಷ್ಣ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.