ತಿರುಪತಿ ತಿಮ್ಮಪ್ಪ ಮೆಟ್ಟಿಲಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು! ಕೊನೆಗೆ ಏನಾಯ್ತು?

tirupathi
Published on

ತಿರುಪತಿ: ನಿಜವಾದ ಪ್ರೇಮಿಗಳು ಆತ್ಮಹತ್ಯೆಗೂ ಹೆದರುವುದಿಲ್ಲ. ಇಂತಹುದೇ ಘಟನೆಯೊಂದು ವಿಶ್ವವಿಖ್ಯಾತ ಧಾರ್ಮಿಕ ಯಾತ್ರಾಸ್ಥಳ ತಿರುಪತಿ-ತಿರುಮಲದ ಪಾದಚಾರಿ ಮಾರ್ಗ(ಮೆಟ್ಟಿಲುಗಳು)ದಲ್ಲಿ ನಡೆದಿದೆ. ಪ್ರೇಮ ಜೋಡಿ ತಿರುಮಲದ ಶ್ರೀವಾರಿ ಮೆಟ್ಟಿಲ ಮೇಲೆ ಆತ್ಮಹತ್ಯೆಗೆ ಯತ್ನಿಸಿ ಸಂಚಲನ ಮೂಡಿಸಿದೆ.

ವಿವಾಹಿತ ಮಹಿಳೆ ಮತ್ತು ಯುವಕ ಸೇರಿ ತಿರುಮಲದ ಶ್ರೀವಾರಿ ಮೆಟ್ಟಿಲುಗಳ ಮೇಲೆ ಶುಕ್ರವಾರ ಬೆಳಗ್ಗೆ ಕ್ರಿಮಿನಾಶಕ ಸೇವಿಸಿದ್ದಾರೆ . 450ನೇ ಮೆಟ್ಟಿಲು ಹತ್ತಿರ ಇವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೇ ವೇಳೆ ಆ ಮಾರ್ಗವಾಗಿ ಹೋಗುತ್ತಿದ್ದ ಭಕ್ತರು ಇದನ್ನು ಗಮನಿಸಿ ಕೂಡಲೇ ಟಿಟಿಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಪಂದಿಸಿದ ಟಿಟಿಡಿ ಸಿಬ್ಬಂದಿ ಇಬ್ಬರನ್ನೂ ಕೆಳಗಿಳಿಸಿದ್ದಾರೆ. ಬಳಿಕ ಸಿದ್ಧವಾಗಿದ್ದ ಆಂಬುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಈ ಜೋಡಿ ಚಿತ್ತೂರು ಜಿಲ್ಲೆಯ ಕೊಂಗಾರೆಡ್ಡಿಪಲ್ಲೆಗೆ ಸೇರಿದವರು ಎಂದು ಪೊಲೀಸರು ಗುರುತಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ 30 ವರ್ಷ ವಯಸ್ಸು. ಆಕೆ ಅದೇ ಗ್ರಾಮದ ಸತೀಶ್ ಎಂಬ 19 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಓಡಿಹೋಗಲು ನಿರ್ಧರಿಸಿದ್ದರು. ಮೂರು ದಿನಗಳ ಹಿಂದೆ ಪತಿ ಮತ್ತು ಮಕ್ಕಳನ್ನು ಬಿಟ್ಟು ಮಹಿಳೆ ಮತ್ತು ಯುವಕ ಓಡಿ ಹೋಗಿದ್ದರು. ಈ ಅವಧಿಯಲ್ಲಿ ಅವರು ಅನೇಕ ಸ್ಥಳಗಳಿಗೆ ಭೇಟಿ ನೀಡಿ ಅಂತಿಮವಾಗಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಪ್ರಸ್ತುತ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net