

ಚಿಕ್ಕಮಗಳೂರು: ಪ್ರೇಮಿಗಳಿಬ್ಬರು ಒಂದೇ ದುಪ್ಪಟ್ಟಕ್ಕೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡ ಪ್ರಕರಣವೊಂದು ನಡೆದಿದೆ. ಪರಿಣಾಮವಾಗಿ ಮರವೊಂದರಲ್ಲ ಜೋಡಿಶವ ನೇತಾಡುತ್ತಿರುವುದು ಕಂಡುಬಂದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಲ್ಲುಗುಡ್ಡೆ ಅಣೂರಿನ ದರ್ಶನ್ ಹಾಗೂ ಹಾಸನ ಜಿಲ್ಲೆಯ ಹಾನ್ಬಾಳ್ ಮೂಲದ ಪೂರ್ವಿಕಾ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಅಲ್ದೂರು ಸಮೀಪದ ಗುಲ್ಲನಪೇಟೆಯ ಸತ್ತಿಹಳ್ಳಿ ನಿರ್ಜನ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.
ಮೃತದೇಹಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೃತರನ್ನು ಪ್ರೇಮಿಗಳು ಎಂದು ಅಂದಾಜಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಂಬಂಧಿಕರನ್ನು ಸಂಪರ್ಕಿಸುವ ಯತ್ನ ನಡೆದಿದ್ದು, ಅಲ್ದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.