

ಬೆಂಗಳೂರು: ಮದುವೆಯಾಗಲು ಬೆಂಗಳೂರಿನಿಂದ ಗೋವಾಗೆ ಹೋಗಿದ್ದ ಪ್ರೇಮಿಗಳ ಮಧ್ಯೆ ಕಿತ್ತಾಟವಾಗಿ ಕೊನೆಗೆ ಯುವಕ, ಯುವತಿಯನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರ ನೆರವಿನಿಂದ ಬಂಧಿಸುವಲ್ಲಿ ಗೋವಾ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ರೋಶಿಣಿ ಮೋಸೆಸ್ (22) ಕೊಲೆಯಾದ ಯುವತಿ. ಸಂಜಯ್ ಕೆವಿನ್ (22) ಆರೋಪಿ. ಸಂಜಯ್ ಮತ್ತು ರೋಶಿಣಿ ನಡುವಿನ ಐದು ವರ್ಷಗಳ ಸ್ನೇಹ ಪ್ರೀತಿಗೆ ತಿರುಗಿತ್ತು. ಸಂಬಂಧಿಕರು, ಸ್ನೇಹಿತರು ಇಲ್ಲದೆ ಇಬ್ಬರೂ ಮದುವೆಯಾಗಲು ಗೋವಾಕ್ಕೆ ಹೊರಟಿದ್ದಾರೆ. ಈ ವೇಳೆ ಇಬ್ಬರ ನಡುವೆ ಬಸ್ನಲ್ಲಿ ಜಗಳ ನಡೆದಿದೆ. ಅದೇ ಸಿಟ್ಟಿನಿಂದ ರೋಶಿಣಿಯನ್ನು ಗೋವಾದ ಪ್ರತಾಪ್ ನಗರಲ್ಲಿರುವ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಶವವನ್ನು ಅಲ್ಲೇ ಎಸೆದು ಹೋಗಿದ್ದಾನೆ.
ಜೂ.15ರಂದು ಶವ ಪತ್ತೆಯಾಗಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಯುವತಿ ಪರ್ಸ್ನಲ್ಲಿ ಬಸ್ ಟಿಕೆಟ್ ಸಿಕ್ಕಿತ್ತು. ಟಿಕೆಟ್ ಕರ್ನಾಟಕ ರಾಜ್ಯಕ್ಕೆ ಸೇರಿದ ಬಸ್ನದ್ದು ಎಂಬುದು ಗೊತ್ತಾಗಿ ತನಿಖೆ ಚುರುಕುಗೊಳಿಸಿದ್ದರು. ಸಂಜಯ್ ಎಂಬಾತ ಕೊಲೆ ಮಾಡಿರುವುದು ಪತ್ತೆಯಾಗಿ, ಗೋವಾದಿಂದ ಬೆಂಗಳೂರಿಗೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.