

ಕೆ.ಎಸ್. ನರಸಿಂಹಸ್ವಾಮಿ ಈ ನಾಡಿಗೆ ಮಲ್ಲಿಗೆಯ ಪರಿಮಳದಂಥ ಕವಿತೆಗಳನ್ನು ನೀಡಿದವರು. ನಮ್ಮ ಸಾಮುದಾಯಿಕ ಪ್ರಜ್ಞೆಯಲ್ಲಿ ‘ಮೈಸೂರು ಮಲ್ಲಿಗೆ’ಯ ಕವನಗಳಿಂದ ನೆಲೆನಿಂತವರು. ಆದರೆ ಮನುಷ್ಯ ಸಂಬಂಧಗಳ ಮಾಧುರ್ಯವನ್ನು ಹೇಳುತ್ತಲೇ ಅದರ ಆಚೆಗಿನ ಕಟುಸತ್ಯಗಳನ್ನೂ ಹೇಳಿದ ಪ್ರೇಮಕವಿ. ನಾಡಿನ ಸಾರಸ್ವತ ಲೋಕದ ಈ ಮಹತ್ವದ ಕವಿಯ ಜನ್ಮದಿನ ಇಂದು (ಜ. 26). ಈ ನೆಪದಲ್ಲಿ ಕೆಎಸ್ನ ನೆನಪುಗಳನ್ನು ಅವರನ್ನು ಹತ್ತಿರದಿಂದ ಬಲ್ಲ ಮೂವರು ಹಂಚಿಕೊಂಡಿದ್ದಾರೆ.
ಅದನಿದನು ಹಾಡೆಂಬ ಕಡ್ಡಾಯವೇಕೆ?
ವೇದಿಕೆಯ ಮೇಲಿನಿಂದುಪದೇಶವೇಕೆ?
ಕಬ್ಬಿಗನು ಬೆದರುವನೆ ಸ್ವಾತಂತ್ರ್ಯಪ್ರೇಮಿ
ತಾರೆಗಳನಾಳುವನು ಸಾಲದೀ ಭೂಮಿ
ಎಂದು ಘೊಷಿಸಿದ ಕೆ.ಎಸ್. ನರಸಿಂಹಸ್ವಾಮಿ ಯಾವ ಪಂಥ ಚಳವಳಿಗಳಿಗೂ ತಮ್ಮನ್ನು ಕಟ್ಟಿಹಾಕಿಕೊಳ್ಳದೆ, ಎಲ್ಲ ಮಾರ್ಗಗಳಿಂದ ಪಡೆಯಬೇಕಾದ್ದನ್ನು ಪಡೆದು, ಆಧುನಿಕ ಕಾವ್ಯ ಸಂದರ್ಭದಲ್ಲಿ ಅಪಾರ ಜನಪ್ರೀತಿಯನ್ನೂ, ವಿದ್ವಜ್ಜನರ ಮೆಚ್ಚುಗೆಯನ್ನೂ ಪಡೆದ ವಿಶಿಷ್ಟ ಕವಿ. ಇಂದು ಅವರ 110ನೇ ಜನ್ಮದಿನೋತ್ಸವ (26 ಜನವರಿ 1915). ಕನ್ನಡ ಸಂವೇದನಾಶೀಲ ಮನಸ್ಸಿಗೆ ಇಂದು ಗಣರಾಜ್ಯೋತ್ಸವದ ಜೊತೆಗೆ ಕಾವ್ಯಹಬ್ಬವೂ ಹೌದು.
ನೆನಪಾಗುತ್ತದೆ: ಕೆಎಸ್ನ ಇದ್ದಾಗ ಪ್ರತಿ ವರ್ಷ ಜನವರಿ 26ರಂದು ನಾವು ಕೆಲವು ಗೆಳೆಯರು ಅವರ ಮನೆಗೆ ಹೋಗಿ ಶುಭಾಶಯ ಹೇಳಿ, ಕವಿಪತ್ನಿ ವೆಂಕಮ್ಮನವರ ಆತ್ಮೀಯ ಆತಿಥ್ಯವನ್ನು ಸವಿದು ಬರುತ್ತಿದ್ದೆವು. ನಂತರದಲ್ಲಿ ನಾನು ಕೆಎಸ್ನ ಟ್ರಸ್ಟ್ನ ಅಧ್ಯಕ್ಷನಾಗಿದ್ದಾಗ ಅವರ ಹುಟ್ಟೂರು ಕಿಕ್ಕೇರಿಯಲ್ಲಿಯೇ ಅವರ ಜನ್ಮದಿನೋತ್ಸವವನ್ನು ಕಾವ್ಯೋತ್ಸವವನ್ನಾಗಿ ಆಚರಿಸುವುದನ್ನು ರೂಢಿಗೆ ತರಲು ಪ್ರಯತ್ನಿಸಿದ್ದೆವು. ಕಿಕ್ಕೇರಿಯನ್ನು ಒಂದು ಸಾಂಸ್ಕೃತಿಕ ಪ್ರವಾಸಿತಾಣವನ್ನಾಗಿ ಮಾಡುವ ಹಂಬಲದಿಂದ ಅಲ್ಲಿದ್ದ ಅವರ ಮನೆಯನ್ನು ಸ್ವಾಧೀನಕ್ಕೆ ಪಡೆಯುವ ಪ್ರಯತ್ನ ನಡೆಸಿದ್ದೆವು. ಕಿಕ್ಕೇರಿಯಲ್ಲೊಂದು ವಿಸ್ತಾರವಾದ ಕೆರೆಯಿದೆ. ಅದನ್ನು ಕೆಎಸ್ನ ಸರೋವರ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಿ, ಅಲ್ಲೊಂದು ಥೀಮ್ ಪಾರ್ಕ್ ಮಾಡುವ ಮೂಲಕ ಸ್ಮಾರಕ ಮಾಡುವ ಆಶಯದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿ, ಸುಮಾರು 4 ಕೋಟಿ ರೂ. ಬಿಡುಗಡೆಯಾಗಿ, ಅಭಿವೃದ್ಧಿ ಕಾರ್ಯವೂ ಆರಂಭವಾಗಿ ಆಮೇಲೆ ಅದು ಸ್ಥಗಿತಗೊಂಡಿತು. ಯಾವುದೇ ಸಾರ್ವಜನಿಕ ಸಂಸ್ಥೆಯಲ್ಲಿ ಐದು ವರ್ಷಗಳಿಗಿಂತ ಹೆಚ್ಚು ಅವಧಿಗೆ ಅಧಿಕಾರದಲ್ಲಿರಬಾರದು ಎಂಬ ಸದಾಚಾರದಂತೆ ನಾನು ಟ್ರಸ್ಟ್ಗೆ ರಾಜೀನಾಮೆ ಸಲ್ಲಿಸಿದ ನಂತರ ಈ ಯೋಜನೆಗಳೆಲ್ಲ ಏನಾಗಿವೆಯೋ! ಸಾಹಿತಿಗಳಿಗೆ ಕನಸುಗಳಿರುತ್ತವೆ, ಅಧಿಕಾರ ಇರುವುದಿಲ್ಲ; ಅಧಿಕಾರದಲ್ಲಿರುವವರಿಗೆ ಇಂತಹ ಕನಸುಗಳಿರುವುದಿಲ್ಲ. ಅವರ ಆದ್ಯತೆಗಳೇ ಬೇರೆ! ಈಗ ಕೆಎಸ್ನ ನೆನಪಿಸಿಕೊಳ್ಳುವ ಅತ್ಯುತ್ತಮ ಮಾದರಿಯೆಂದರೆ ಅವರ ಕಾವ್ಯದ ಮರು ಓದಿನ ಮೂಲಕವೇ!
ತಮ್ಮ ಮೊದಲ ಸಂಕಲನ ‘ಮೈಸೂರು ಮಲ್ಲಿಗೆ’ ಯಿಂದಲೇ ಕನ್ನಡ ನಾಡಿನ ಅಂತಃಕರಣವನ್ನು ಕೆಎಸ್ನ ಸೂರೆಗೊಂಡರು. ಗಂಡು ಹೆಣ್ಣಿನ ಸಂಬಂಧದ ಸವಿ ಸೂಕ್ಷ್ಮಗಳನ್ನೆಲ್ಲ ಜನಭಾಷೆಯಲ್ಲಿ ಸೊಗಸಾಗಿ ಹಿಡಿದಿಟ್ಟರು. ಒಮ್ಮೆ ನಾನು ಅವರನ್ನು ಬದುಕಿನ ಚೆಲುವು ಯಾವುದು ಎಂದು ಕೇಳಿದಾಗ ಅವರು ಥಟ್ಟನೆ ಕೊಟ್ಟ ಉತ್ತರ ಅನುಕೂಲ ದಾಂಪತ್ಯ. ಶೃಂಗಾರವನ್ನು ಔಚಿತ್ಯದ ಹದ ಮೀರದೆ ವ್ಯಕ್ತಪಡಿಸುವುದು ಸುಲಭ ಸಾಧ್ಯವಲ್ಲ. ಕೊಂಚ ಎಚ್ಚರ ತಪ್ಪಿದರೆ ಅದು ಅಶ್ಲೀಲವಾಗಿಬಿಡುತ್ತದೆ. ಹಾಗೆಂದು ಪ್ರಜ್ಞಾಪೂರ್ವಕವಾಗಿ ನಿಗಾ ವಹಿಸಿದರೆ ರಸ ಹದಗೆಟ್ಟು ನೀರಸವಾಗಿಬಿಡುತ್ತದೆ. ಒಂದು ನಿರ್ದಿಷ್ಟ ಹದದಲ್ಲಿ ಅದರ ಸೊಗಸನ್ನು ಉಳಿಸಿಕೊಳ್ಳುತ್ತಲೇ ಗಾಂಭೀರ್ಯದಿಂದ ನಿರ್ವಹಿಸಿದಾಗ ಮಾತ್ರ ಯಶಸ್ಸು ಸಿಗುತ್ತದೆ. ಕೆಎಸ್ನ ಹಾಗೆ ಚಿತ್ರಿಸಿದ್ದಾರೆಂದೇ ಅವರ ಮೈಸೂರು ಮಲ್ಲಿಗೆ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ನಮ್ಮ ಸಮಾಜ ಹಾಗೂ ಕೆಎಸ್ನ ಒಟ್ಟಿಗೇ ಸಾಧಿಸಿದ ಪುಣ್ಯವಿಶೇಷ ಇಂತಹ ಅಭಿವ್ಯಕ್ತಿ. ಒಂದು ಹೆಣ್ಣಿಗೊಂದು ಗಂಡು / ಹೇಗೊ ಸೇರಿ ಹೊಂದಿಕೊಂಡು / ಕಾಣದೊಂದು ಕನಸ ಕಂಡು / ಮಾತಿಗೊಲಿಯದಮೃತವುಂಡು / ದುಃಖ ಹಗುರವೆನುತಿರೆ / ಪ್ರೇಮವೆನಲು ಹಾಸ್ಯವೇ? ಇದು ಕೆಎಸ್ನ ಅವರ ಪ್ರೇಮತತ್ವ, ತಾತ್ವಿಕ ಚಿಂತನೆ.
ಕೆಎಸ್ನ ಕಾವ್ಯದ ಕೇಂದ್ರ ಪ್ರತೀಕ ಕುಟುಂಬ. ಆರಂಭದಲ್ಲಿ ಗಂಡ ಹೆಂಡತಿ ಮಗು ಈ ನೆಲೆಯಲ್ಲಿದ್ದ ಕುಟುಂಬ ಪರಿಕಲ್ಪನೆ ಕಡೆಗೆ ಭೂಮಿ ತಾಯಿ, ದೇವರು ತಂದೆ, ಮನುಷ್ಯ ಮಗು ಎಂಬ ವಿಸ್ತಾರವಾದ ನೆಲೆ ಪಡೆದುಕೊಳ್ಳುವಲ್ಲಿ ಅವರ ಕಾವ್ಯ ಮಹತ್ವದ್ದಾಗುತ್ತದೆ. ಮನುಷ್ಯನ ವಿಕಾಸ ಪಥದಲ್ಲಿ ಭೂಮಿ-ಮನುಷ್ಯ-ದೈವ ಈ ಸಂಬಂಧದ ಸ್ವರೂಪವೇನು? ಮನುಷ್ಯನ ಕ್ರಿಯಾಶೀಲತೆ ಹಾಗೂ ದೈವದ ಬಗೆಗಿನ ನಂಬಿಕೆ ಇವುಗಳ ಸಂಬಂಧವೇನು ಮೊದಲಾದ ಪ್ರಶ್ನೆಗಳಿಗೆ ತಮ್ಮ ಕವಿತೆಗಳಲ್ಲಿ ಕೆಎಸ್ನ ಮುಖಾಮುಖಿಯಾಗುತ್ತಾರೆ.
ಅವರ ಕಡೆಕಡೆಯ ಕವಿತೆಗಳಲ್ಲಿ ಸೃಜನಶೀಲತೆಯ ಮೇಲೆ ಪ್ರಭುತ್ವ ನಡೆಸುವ ದಬ್ಬಾಳಿಕೆ ಅವರನ್ನು ಬಹುವಾಗಿ ಕಾಡಿತ್ತು.
ಬತ್ತಿದ ಕೆರೆಯಂಗಳದಲಿ/ ಹಾಡುಹಕ್ಕಿ ಸತ್ತಿದೆ
ಅದರ ಕತೆಯ ಕೇಳಲಿಕ್ಕೆ/ ಯಾರಿಗೆ ಪುರಸತ್ತಿದೆ?
ಕೆಎಸ್ನ ಅವರ ಈ ಪ್ರಶ್ನೆ ಈ ಕಾಲದ ನಮ್ಮ ಪ್ರಶ್ನೆಯೂ ಹೌದು. ಹೀಗಾಗಿಯೇ ಕೆಎಸ್ನ ಇಂದಿಗೂ ಪ್ರಸ್ತುತ.