ವಾಲೆಂಟೈನ್ಸ್​ ಡೇ : 'ಪ್ರೀತಿ, ಮಾಸ್ಕ್ ಮತ್ತು ಆರು ಅಡಿ ಅಂತರ' !

vale
Published on

ಮುಂಬೈ: ಪ್ರೀತಿಯಲ್ಲಿ ಮುಳುಗಿದವರಿಗೆ ಜಗತ್ತೇ ಕಾಣಲ್ಲ ಅಂತಾರೆ. ಇನ್ನು ಕರೊನಾ ಖಯಾಲಿ ಬರುತ್ತಾ ? ಅದಕ್ಕಾಗೇ ಯುವ ಜೋಡಿಗಳಿಗೆ ವಾಲೆಂಟೈನ್ಸ್ ಡೇ ಅಬ್ಬರದಲ್ಲಿ ಕರೊನಾ ಮುನ್ನೆಚ್ಚರಿಕೆಗಳನ್ನು ಮರೆಯದಿರಿ ಎಂದು ಮುಂಬೈ ಪೊಲೀಸರು ಬಿನ್ನಹ ಮಾಡಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ವಿಭಿನ್ನ ರೀತಿಯಾಗಿ ಮೂಡಿಬಂದಿರುವ ಪೊಲೀಸರ ಅಹವಾಲು ನೆಟ್ಟಿಗರ ಗಮನ ಸೆಳೆದಿದೆ.

'ಈ ವಾಲೆಂಟೈನ್ಸ್ ಡೇ ನಮಗೆ ಬೇಕಿರುವುದು ಎಂದರೆ ಪ್ರೀತಿ, ಒಂದು ಮಾಸ್ಕ್ ಮತ್ತು 6 ಅಡಿ ಅಂತರ' ಎಂದು ಬರೆದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಆಕರ್ಷಕ ಜಿಫ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮಾಸ್ಕ್ ಧರಿಸಿರುವ ಹುಡುಗ ಮತ್ತು ಹುಡುಗಿಯ ಮಧ್ಯ ಒಂದು ಲವ್ ಶೇಪ್ ಇರುತ್ತದೆ. ಕ್ರಮೇಣ ಹೆಚ್ಚು ಲವ್​ ಶೇಪ್​ಗಳು ಬಂದು ಅಂತರ ಮೂಡಿಸುತ್ತವೆ. ಇದರೊಂದಿಗೆ "ಅಂತರವು ಪ್ರೀತಿ ಹೆಚ್ಚು ಬಲವಾಗಿ ಬೆಳೆಯುವಂತೆ ಮಾಡುತ್ತದೆ" ಎಂದು ಸೂಚಿಸುವ ಅಡಿಬರಹ ಗೋಚರಿಸುತ್ತದೆ!

ಮುಂಬೈ ನಗರ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಮತ್ತೊಂದು ಆಕರ್ಷಕ ಪೋಸ್ಟ್ ಇದೆ. ಜೋಡಿಗಳಿಗೆ "ಸುರಕ್ಷತೆಯನ್ನು ಮೊದಲು ಕಾಪಾಡಿಕೊಳ್ಳಿ" ಎಂದು ಈ ಸಂದೇಶ ಹೇಳುತ್ತದೆ. 'ಐ ಲವ್ ಯೂ' ಎಂಬ ಮೂರು ಪದಗಳ ಬದಲಿಗೆ 'ಸೇಫ್ಟಿ ಕಮ್ಸ್ ಫಸ್ಟ್'​ ಎಂಬ ಮೂರು ಪದಗಳನ್ನು ಪೇರಿಸಿದ್ದಾರೆ! ಚಿತ್ರದಲ್ಲಿ ಕುರ್ಚಿಗಳ ಮೇಲೆ ಕುಳಿತಿರುವ ಜೋಡಿಯ ಮಧ್ಯೆ ಒಂದು ಮಾಸ್ಕ್​ ಇದೆ. ಜೊತೆಗೆ ಢಾಯಿ ಅಕ್ಷರ್ ಪ್ರೇಮ್​ ಕೆ, ದೋ ಗಜ್ ಸೇಫ್ಟಿ ಕೇ ಅಂತ ಮುದ್ರಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net