ತಾಯಿ ಮಗುವನ್ನು ಪ್ರೀತಿಸುವ ಹಾಗೆ ಭಗವಂತನನ್ನು ಪ್ರೀತಿಸಿ

ವಿಜಯವಾಣಿ (1)
Published on
ಈ ಜಗತ್ತಿನಲ್ಲಿ ನಾವು ಕಾಣುತ್ತಿರುವ ಪ್ರೀತಿ ಸ್ವಾರ್ಥಮಯವಾಗಿದೆ. ಅತ್ಯಂತ ವಿರಳವಾಗಿ ಶುದ್ಧ ಪ್ರೀತಿಯನ್ನು ಕಾಣಬಹುದಷ್ಟೆ. ಹಾಗಾದರೆ ನಿಜವಾದ ಹಾಗೂ ಶುದ್ಧವಾದ ಭಗವತ್ ಪ್ರೀತಿ ಯಾವುದು? ಗೋಪಿಕಾ ಸ್ತ್ರೀಯರು ಭಗವಾನ್ ಶ್ರೀಕೃಷ್ಣನನ್ನು, ಭಕ್ತೆ ಮೀರಾ ಗಿರಿಧಾರಿಯನ್ನು , ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ್ನು, ಆಂಡಾಳ್ ಶ್ರೀರಂಗನಾಥ ಸ್ವಾಮಿಯನ್ನು ಪ್ರೀತಿಸಿದ ರೀತಿ.

ಈ ಯುಗದಲ್ಲಿ ಅಪ್ಪಟ ಭಗವದ್ ಪ್ರೀತಿಯನ್ನು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದು ತನ್ಮೂಲಕ ಇಡೀ ಜಗತ್ತಿಗೆ ಭಗವದ್ ಪ್ರೀತಿ ಎಂಬುದರ ಸಂದೇಶವನ್ನು ನೀಡಿದ ಯುಗಾವತಾರವೇ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು. ಭವತಾರಿಣಿ ಜಗನ್ಮಾತೆಯನ್ನು ರಾಮಕೃಷ್ಣರು ತಮ್ಮ ಸಾಧನಾ ಪರ್ವದಲ್ಲಿ ಅತ್ಯಂತ ಸ್ಪಷ್ಟವಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ಯಾವ ಸಮಯದಲ್ಲಿ ಯಾವುದೇ ವಿಚಾರವಿರಲಿ, ನಾನು ಭವತಾರಿಣಿಯಲ್ಲಿ ಕೇಳಿ ಬರುತ್ತೇನೆ. ಭವತಾರಿಣಿಯ ಅನುಮತಿ ಪಡೆದೇ ಈ ಕಾರ್ಯದಲ್ಲಿ ಮುಂದುವರಿಯುತ್ತೇನೆ ಇತ್ಯಾದಿ ವಿಚಾರಗಳನ್ನು ಪರಮಹಂಸರ ದೈನಂದಿನ ಜೀವನ ಪಥದಲ್ಲಿ ನಾವು ಕಾಣಬಹುದಾಗಿದೆ. ತಾಯಿಯ ವಾತ್ಸಲ್ಯ, ಮಾತೃಭಕ್ತಿ, ಜಗದೀಶ್ವರಿಯ ಆಪ್ಯಾಯತೆಯನ್ನು ಕಣಕಣದಲ್ಲಿ ಅನುಭವಿಸುತ್ತಿದ್ದ ಮಹಾನ್ ಅವತಾರವರಿಷ್ಠರು ರಾಮಕೃಷ್ಣ ಪರಮಹಂಸರು.

ಭಗವದ್ದರ್ಶನಕ್ಕೆ ಭಗವತ್ಪ್ರೇಮ ಮುಖ್ಯವಾದುದು. ಅದರಲ್ಲಿಯೂ ಶುದ್ಧವಾದ ಯಾವ ಬಯಕೆಯೂ ಇಲ್ಲದ ಕೇವಲ ಭಗವದ್ದರ್ಶನದ ಆಕಾಂಕ್ಷೆಯಿಂದ ಪ್ರೀತಿಸಬೇಕು. ಆ ಭಗವಂತನು ನಿರೀಕ್ಷಿಸುವುದು ಅದೆಷ್ಟು ಪಾವಿತ್ರ್ಯದಿಂದ ಕೂಡಿದ ಮನಸ್ಸಿನಿಂದ ಅರ್ಚನೆ, ಆರಾಧನೆಗಳು ಸಾಗುತ್ತವೆ ಎನ್ನುವುದನ್ನು. ಸನಾತನ ಧರ್ಮದಲ್ಲಿ ಈ ತೆರನಾದ ವಿಚಾರಗಳಿಗೆ ಮಹತ್ವವಿದೆಯೇ ವಿನಃ ಕೇವಲ ಆಡಂಬರ, ಪ್ರದರ್ಶನಗಳಿಗಲ್ಲ. ಉದಾಹರಣೆಗೆ ಏನೂ ಅರಿಯದ, ನಿಷ್ಠಾವಂತ ಮತ್ತು ಪವಿತ್ರ ಹೃನ್ಮನಗಳಿದ್ದ ಬೇಡರ ಕಣ್ಣಪ್ಪನ ಸೇವೆಯನ್ನು ಪರಮೇಶ್ವರ ಸ್ವೀಕರಿಸಿದನೇ ವಿನಃ, ಬಂಗಾರ, ಬೆಳ್ಳಿ ಹರಿವಾಣಗಳಲ್ಲಿ ಕ್ಷೀರ, ಪಾನಕಾದಿಗಳನ್ನು ಸ್ವೀಕರಿಸುವುದಿಲ್ಲ.

ದಶಕಗಳಷ್ಟು ಕಾಲ ಪ್ರತಿ ದಿನ ಸೊಗಸಾದ ಹಣ್ಣು ಹಂಪಲುಗಳನ್ನು ಆಯ್ದು ತಂದು ಮರ್ಯಾದಾ ಪುರುಷೋತ್ತಮನಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದ ಶಬರಿಗೆ ರಾಮನೇ ಹುಡುಕಿ ಬಂದು ದರ್ಶನವಿತ್ತನಲ್ಲ ಅದೇ ಭಗವತ್ಪ್ರೀತಿಯಿಂದ. ಈ ತೆರನಾದ ಅನೇಕಾನೇಕ ಉದಾಹರಣೆಗಳನ್ನು ನೀಡಬಹುದು. ಇಲ್ಲಿ ಮುಖ್ಯವಾಗಿ ಕಾಣುವುದು ಭಗವದ್ ಪ್ರೀತಿ, ಭಕ್ತಿಯೇ ವಿನಃ ಆಡಂಬರ, ತೋರ್ಪಡಿಕೆ ಇತ್ಯಾದಿಗಳಲ್ಲ. ಅದೊಂದು ದಿನ ಮಾಸ್ಟರ್ ಮಹಾಶಯ, ರಾಮಕೃಷ್ಣರ ಬಳಿ ಸಾರಿ, ‘ಭಗವಂತನನ್ನು ದರ್ಶನ ಮಾಡಲಾಗುವುದೇ? ಇದು ಸಾಧ್ಯವೇ?’ ಎಂದು ಪ್ರಶ್ನಸು ತ್ತಾನೆ. ರಾಮಕೃಷ್ಣರು,‘ಹೌದು ನಿಸ್ಸಂದೇಹವಾಗಿ. ಆಗಾಗ ಏಕಾಂತವಾಸ, ಆತನ ನಾಮ ಗುಣಕೀರ್ತನೆ, ವಸ್ತು-ವಿಚಾರ ಈ ಸಾಧನೆಗಳನ್ನೆಲ್ಲಾ ಅವಲಂಬಿಸಬೇಕಾಗುತ್ತದೆ’ ಎನ್ನುತ್ತಾರೆ. ಮಾಸ್ಟರ್ ಮಹಾಶಯ ಯಾವ ಮಾನಸಿಕ ಅವಸ್ಥೆಯಲ್ಲಿ ಭಗವಂತನ ದರ್ಶನ ಪಡೆಯಲು ಸಾಧ್ಯ? ಎಂದು ಮರು ಪ್ರಶ್ನಿಸುತ್ತಾನೆ.

ರಾಮಕೃಷ್ಣರು, ‘ಅತ್ಯಂತ ವ್ಯಾಕುಲಚಿತ್ತನಾಗಿ ಕಂಬನಿ ಮಿಡಿಯುತ್ತ ಭಗವದ್ದರ್ಶನಕ್ಕೆ ಮೊರೆ ಹೊಕ್ಕರೆ ಆತನ ದರ್ಶನ ಪಡೆಯಲು ಸಾಧ್ಯ. ಸಾಮಾನ್ಯವಾಗಿ ಪ್ರಾಪಂಚಿಕರು ಮಡದಿ, ಮಕ್ಕಳು, ಆಸ್ತಿ, ಹಣಕ್ಕಾಗಿ ಬಿಂದಿಗೆ ತುಂಬಾ ಕಣ್ಣೀರು ಸುರಿಸುತ್ತಾರೆ. ಆದರೆ ಭಗವದ್ದರ್ಶನ ಬೇಕೆಂದು ಯಾರು ತಾನೆ ಕಣ್ಣೀರಿಡುತ್ತಾರೆ? ಸಹಜ ಕರೆಯಿಂದ ಭಗವತಿಯನ್ನು ಕರೆಯಬೇಕು’ ಎಂದು ತಿಳಿಸುತ್ತಾರೆ. ಪರಮಹಂಸರು ಮತ್ತೆ ತಮ್ಮ ಬೋಧನೆಯನ್ನು ಮುಂದುವರಿಸಿ ಮಾಸ್ಟರ್ ಮಹಾಶಯನಿಗೆ ಹೀಗೆ ತಿಳಿಸುತ್ತಾರೆ. ವ್ಯಾಕುಲತೆ, ವ್ಯಾಕುಲತೆ ಉಂಟಾಯಿತೆಂದರೆ ಅರುಣೋದಯವಾದ ಹಾಗೆ. ವ್ಯಾಕುಲತೆ ಆದ ನಂತರವೇ ಭಗವದ್ದರ್ಶನ ಎನ್ನುತ್ತಾರೆ ರಾಮಕೃಷ್ಣರು. ‘ವಿಷಯಿ ವಿಷಯಗಳ ಮೇಲಿರುವ ಪ್ರೀತಿ, ತಾಯಿಗೆ ಮಕ್ಕಳ ಮೇಲಿರುವ ಪ್ರೀತಿ, ಸತಿಗೆ ಪತಿಯ ಮೇಲಿರುವ ಪ್ರೀತಿ.

ಈ ಮೂರು ಪ್ರೀತಿಗಳೂ ಯಾರಲ್ಲೇ ಆಗಲಿ ಒಟ್ಟಿಗೆ ಮೂಡುವುದಾದರೆ, ಅವುಗಳ ಪರಿಣಾಮದಿಂದ ಆತನಿಗೆ ಭಗವದ್ ಸಾಕ್ಷಾತ್ಕಾರ ಖಂಡಿತ ಸಾಧ್ಯವಾಗುತ್ತದೆ. ಮುಖ್ಯಾಂಶವೆಂದರೆ ಭಗವಂತನನ್ನು ಪ್ರೀತಿಸಬೇಕು ತಾಯಿ ಮಗುವನ್ನು ಪ್ರೀತಿಸುವ ಹಾಗೆ, ವಿಷಯಿ ಕೇವಲ ವಿಷಯ ವಸ್ತುಗಳನ್ನು ಪ್ರೀತಿಸುವ ಹಾಗೆ, ಸತಿ ಪತಿಯನ್ನು ಪ್ರೀತಿಸುವ ಹಾಗೆ. ಈ ಮೂರು ಪ್ರೀತಿಗಳನ್ನೂ, ಈ ಮೂರು ಆಕರ್ಷಣೆಗಳನ್ನೂ ಒಟ್ಟುಗೂಡಿಸಿದಲ್ಲಿ ಅದರ ಪರಿಣಾಮವೇ ಭಗವಂತನ ದರ್ಶನ! ಈ ಮೂರೂ ಪ್ರೀತಿಗಳನ್ನು ಭಗವಂತನ ಕಡೆ ತಿರುಗಿಸಿದಾಕ್ಷಣ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ ’ ಎನ್ನುತ್ತಾರೆ. ಅಬ್ಬಾ! ಎಂತಹ ಅದ್ಭುತ ಹಾಗೂ ಪರಿಣಾಮಕಾರಿಯಾದ ಉಪಾಯ ಭಗವದ್ದರ್ಶನಕ್ಕೆ! ನಿಜಕ್ಕೂ ಭಗವಾನ್ ರಾಮಕೃಷ್ಣರ ಈ ಅಮೃತವಾಣಿ ಸಾಮಾನ್ಯ ಜನರಿಗೆ ಭಗವದ್ದರ್ಶನಕ್ಕೆ ಸುಲಭೋಪಾಯದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net