

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿಯಲ್ಲಿರುವ ಸಿಆರ್ಪಿಎಫ್ ಶಾಲೆ (CRPF School) ಎದುರು ನಿಗೂಢ ಸ್ಫೋಟ (Blast) ಒಂದು ಸಂಭವಿಸಿದ್ದು, ತೀವ್ರ ಆತಂಕವನ್ನು ಹುಟ್ಟುಹಾಕಿದೆ. ಬೆಳಗ್ಗೆ 7:47ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರು (Police) ಹಾಗೂ ಅಗ್ನಿಶಾಮಕ ದಳದ (Fire Fighters) ತಂಡಗಳು ಪ್ರದೇಶದಲ್ಲಿ ಶೋಧವನ್ನು ಮುಂದುವರೆಸಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer), ಸ್ಫೋಟದಲ್ಲಿ ಶಾಲೆಯ ಗೋಡೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಸ್ಥಳಕ್ಕೆ ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಹಾಗೂ ಎಫ್ಎಸ್ಎಲ್ ತಂಡ ದೌಡಾಯಿಸಿದ್ದು, ಕಾರಣವೇನು ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.
ಸ್ಫೋಟದ ರಭಸಕ್ಕೆ ಶಾಲೆಯ ಬಳಿ ನಿಲ್ಲಿಸಿದ್ದ ಕಾರುಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ ಮತ್ತು ಆ ಪ್ರದೇಶದಲ್ಲಿನ ಅಂಗಡಿಗಳ ಸೂಚನಾ ಫಲಕಗಳಿಗೆ ಹಾನಿಯಾಗಿದೆ. ಘಟನೆ ನಡೆದ ಪ್ರದೇಶದ ಸುತ್ತ ಅಳವಡಿಸಲಾಗಿರುವ ಸಿಸಿಟವಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು (Senior Police Officer) ತಿಳಿಸಿದ್ದಾರೆ.