

ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರ ಯಶಸ್ವಿಯಾಗಿ ಮೊದಲ ವಾರ ಪೂರೈಸಿ, ಎರಡನೇ ವಾರಕ್ಕೆ ಕಾಲಿಟ್ಟಿದೆ. ಕನ್ನಡಿಗರೇ ನಿರ್ವಿುಸಿರುವ, ಕನ್ನಡದ ಸಾಧಕನ ಕುರಿತ ಮೊದಲ ಬಯೋಪಿಕ್ಗೆ ವಿಶ್ವಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಹೆಸರಾಂತ ರಾಜಕಾರಣಿಗಳು, ಮಠಾಧೀಶರು, ಉದ್ಯಮಿಗಳು, ಸೆಲೆಬ್ರಿಟಿಗಳಿಂದ ಹಿಡಿದು, ಕಾಲೇಜು, ಶಾಲೆಗಳ ವಿದ್ಯಾರ್ಥಿಗಳವರೆಗೂ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಪ್ರಕಾಶ್ ಬೆಳವಾಡಿ, ರಮೇಶ್ ಭಟ್, ನಿಹಾಲ್, ಭರತ್ ಬೋಪಣ್ಣ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ ಸೇರಿದಂತೆ ಎಲ್ಲರ ನಟನೆಗೂ ಉತ್ತಮ ಮಾತುಗಳು ಕೇಳಿಬರುತ್ತಿವೆ. ಹಾಗಂತ ಚಿತ್ರದ ತಾರಾಗಣ ಇಷ್ಟಕ್ಕೇ ಸೀಮಿತವಾಗಿಲ್ಲ. ಇನ್ನೂ ಹಲ ವಾರು ಪಾತ್ರಗಳು ಚಿತ್ರದಲ್ಲಿವೆ. ಎಲ್ಲ ಪಾತ್ರಗಳಿಗೂ ಅವುಗಳದೇ ಆದ ಪ್ರಾಮುಖ್ಯತೆಯಿದೆ. ಅಂತಹ ಕೆಲವು ಪಾತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.
‘ನಾನು ಬೆಟ್ಟ ಹತ್ತುವುದು ಜನ ನನ್ನನ್ನು ನೋಡಲೆಂದಲ್ಲ, ನಾನು ಜಗತ್ತನ್ನು ನೋಡಲು. ಈಜುವುದಾದರೆ ಸಮುದ್ರದಲ್ಲಿ ಈಜಬೇಕು ಎಂಬ ಧ್ಯೇಯವನ್ನು ಇಟ್ಟುಕೊಂಡು ವಿಆರ್ಎಲ್ ಸಮೂಹ ಸಂಸ್ಥೆ ಸ್ಥಾಪನೆಗೆ ಕಾರಣರಾದ ಡಾ. ವಿಜಯ ಸಂಕೇಶ್ವರ ಅವರು ನಮಗೆ ಲಾಜಿಸ್ಟಿಕ್ ಕಿಂಗ್ ಆಗಿ ಕಾಣುತ್ತಾರೆ. ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು, ಹೊಸ ಉದ್ಯಮ ಸ್ಥಾಪನೆ ಮಾಡುವವರಿಗೆ ಸ್ಪೂರ್ತಿದಾಯಕವಾಗಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದ ಶ್ರೇಯಸ್ಸು ಅವರದು. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲಿಯೂ ಬೇಸರವಾಗದೆ ಕೊನೆತನಕ ನಮ್ಮನ್ನು ಸೆಳೆಯುತ್ತದೆ’
| ಪ್ರಕಾಶ್ ಪ್ರಭು ಉದ್ಯಮಿ ಶಿವಮೊಗ್ಗ
| ವಿ.ಎಸ್. ಕುಮಾರ್ ಮುಖ್ಯಲೆಕ್ಕಾಧಿಕಾರಿಗಳ ಆಪ್ತ ಸಹಾಯಕ, ಕರ್ನಾಟಕ ಜಲಮಂಡಳಿ