

ಕೋಲಾರ: ಮಾಂಡೌಸ್ ಚಂಡಮಾರುತದಿಂದ ಕಳೆದ 4 ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಶೀತಗಾಳಿಯಿಂದ ಶೇ.15ರಿಂದ 20 ಮಾವಿನ ಸಲಿಗೆ ಧಕ್ಕೆಯಾಗಿದೆ.
ಜಿಲ್ಲೆಯಲ್ಲಿ ಸುಮಾರು 50,600 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಇದರಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲೇ ಅಂದಾಜು 27,000 ಹೆಕ್ಟೇರ್ನಲ್ಲಿ ಬೆಳೆಯಿದೆ. ಡಿಸೆಂಬರ್ ಆರಂಭದಲ್ಲಿ ಪ್ರತಿ ವರ್ಷ ಮಾವಿನ ಮರಗಳಲ್ಲಿ ಹೂವು ಪ್ರಾರಂಭವಾಗುತ್ತವೆ. ಈಗಾಗಲೇ ಶೇ.20 ರಿಂದ 24 ರಷ್ಟು ಮರಗಳಲ್ಲಿ ಹೂವು ಕಾಣಿಸಿಕೊಂಡಿದೆ.
ಈ ವರ್ಷ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಡಿಸೆಂಬರ್ ಆರಂಭದಲ್ಲಿ ಹೂವು ತರಿಸಲು ರೈತರು ಮರಗಳಿಗೆ ಉಷ್ಣಾಂಶ ನೀಡುವುದರ ಜತೆಗೆ ರೋಗ ಹತೋಟಿಗೆ ತರಲು ಔಷಧ ಸಿಂಪಡಣೆ ಮಾಡಿದ್ದರು.
ಕಳೆದ ವರ್ಷ ಫಸಲು ಬರದೇ ಇರುವ ಮರಗಳಿಗೆ ಪ್ರಾರಂಭದಲ್ಲಿ ಹೂವು ಬರತೊಡಗಿತ್ತು. ಆದರೆ ಕಳೆದ 4 ದಿನಗಳಿಂದ ಸುರಿದ ಮಳೆ ಹಾಗೂ ಶೀತಗಾಳಿಗೆ ಈಗಾಗಲೇ ಮರಗಳಲ್ಲಿ ಕಾಣಿಸಿಕೊಂಡಿರುವ ಶೇ.15ರಿಂದ 20ರಷ್ಟು ಹೂವು ಮರಗಳಲ್ಲಿಯೇ ತೇವಾಂಶದಿಂದ ಕಮರಿಹೋಗಿ ಹೂವು ಗೊಂಚಲುಗಳಲ್ಲಿ ಕೆಂಪು ಬಣ್ಣಕ್ಕೆ ತಿರುಗಿ ಉದರತೊಡಗಿವೆ.
ಶ್ರೀನಿವಾಸಪುರ ತಾಲೂಕಿನ ಬಂಡಪಲ್ಲಿಯ ಕೆಂಪರೆಡ್ಡಿ ಎಂಬುವವರ 2.5 ಎಕರೆಯಲ್ಲಿ ಬಂದ ಹೂವಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಸಂಪೂರ್ಣವಾಗಿ ಹೂವು ನಷ್ಟವಾಗಿದೆ. ಹಾಗೆಯೇ ತಾಲೂಕಿನ ಪಾತಪಲ್ಲಿ, ಆಲಂಗಿರಿ, ಶೆಟ್ಟಿನಾಯಕನಹಳ್ಳಿ, ಯಲ್ದೂರು ಹೋಬಳಿಯ ಕೆಲವು ಭಾಗಗಳು ಸೇರಿದಂತೆ ಜಿಲ್ಲೆಯಾದ್ಯಂತ ಹೂವು ಕಾಣಿಸಿಕೊಂಡ ಮರಗಳಲ್ಲಿ ಇದೇ ಪರಿಸ್ಥಿತಿ ಉಂಟಾಗಿದೆ.
ಕಳೆದ ವರ್ಷದ ಪರಿಹಾರ ಕೈ ಸೇರಿಲ್ಲ: ಕಳೆದ ವರ್ಷವೂ ಉತ್ತಮ ಫಸಲು ಬಂದಿತ್ತಾದರೂ ಹವಾಮಾನ ವೈಪರೀತ್ಯದಿಂದಾಗಿ ಅಕಾಲಿಕ ಮಳೆ, ಗಾಳಿ ಮೊದಲಾದ ಕಾರಣಗಳಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದರು. ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರಕ್ಕಾಗಿ ರೈತರು ಈಗಲೂ ಬಂದ್ ಮತ್ತು ಧರಣಿ ನಡೆಸಿದರೂ ಪ್ರಯೋಜನವಾಗಿಲ್ಲ. ಕಳೆದ ವರ್ಷದ ವಿಮೆ ಕಂತುಗಳು ರೈತರಿಗೆ ತಲುಪಿಲ್ಲ. ಸರ್ಕಾರ ಸರ್ವೇ ನಡೆಸಿದ ಪರಿಹಾರದಲ್ಲಿ ಶೇ.40 ಹಣ ರೈತರ ಕೈ ಸೇರಿಲ್ಲ. ಈ ವರ್ಷವಾದರೂ ಉತ್ತಮ ಫಸಲು ಬರುತ್ತದೆ ಎಂದು ರೈತರು ಖುಷಿಯಾಗಿದ್ದರು. ಆದರೆ ಪ್ರಾರಂಭದಲ್ಲಿಯೇ ಮಾಂಡೌಸ್ ಚಂಡಮಾರುತಕ್ಕೆ ಸಿಕ್ಕಿ ರೈತರು ಪರದಾಡುವಂತಾಗಿದೆ. ಇನ್ನು ಇದು ಪ್ರಾರಂಭ, ಇನ್ನು ಮುಂದೆ ಮೇ ತನಕ ಫಸಲನ್ನು ಕಾಪಾಡಿಕೊಳ್ಳಬೇಕಿದೆ.
ಎರಡೂವರೆ ಎಕರೆಯಲ್ಲಿ ಶೇ.25ರಷ್ಟು ಹೂವು ಕಾಣಿಸಿಕೊಂಡಿತ್ತು. ಮಳೆ ಹಾಗೂ ಶೀತಗಾಳಿಗೆ ಬಂದ ಹೂವು ಉದುರತೊಡಗಿವೆ. ಸಾವಿರಾರು ರೂ. ಖರ್ಚು ಮಾಡಿ ಔಷಧ ಸಿಂಪಡಿಸಲಾಗಿತ್ತು. ಇದರಿಂದ ಬಂದ ಹೂವು ನಷ್ಟವಾಗಿದೆ. ಮತ್ತೆ ಔಷಧ ಸಿಂಪಡಿಸಿದರೆ ಹೂವು ಬರುವುದಿಲ್ಲ. | ಕೆಂಪರೆಡ್ಡಿ ಬಂಡಪಲ್ಲಿ ರೈತ ಮಳೆಯಿಂದಾಗಿ ಹೂವಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದು ಗಮನಕ್ಕೆ ಬಂದಿದೆ. ಸರ್ವೇ ಆರಂಭಿಸಲಾಗಿದೆ. ಸ್ಯಾಟ್ಲೈಟ್ ಮೂಲಕ ಬೆಳೆ ವಿಮೆ ಸರ್ವೇ ಮಾಡಲಾಗುತ್ತದೆ. ವಿಮೆ ಕಂಪನಿಗಳವರು 4 ಹಂತಗಳಲ್ಲಿ ಬೆಳೆಗೆ ಪರಿಹಾರ ನಿಗದಿಪಡಿಸುತ್ತಾರೆ. ಅದಕ್ಕೆ ತಕ್ಕಂತೆ ಪರಿಹಾರ ನೀಡುತ್ತಾರೆ. | ಶ್ರೀನಿವಾಸನ್, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಶ್ರೀನಿವಾಸಪುರ ಅಕಾಲಿಕ ಮಳೆಯಿಂದ ಮಾವು ಅಲ್ಲದೆ ತರಕಾರಿ ಬೆಳೆಗಳಿಗೆ ಅಪಾರ ನಷ್ಟ ಉಂಟಾಗಿದೆ. ಮಾವು ಹೂವಿನ ಮೇಲೆ ಉಂಟಾಗಿರುವ ನಷ್ಟದ ಬಗ್ಗೆ ಮ್ಯಾಂಗೊ ಮಂಡಳಿಯವರ ಜೊತೆಗೆ ಚರ್ಚಿಸಿ ಪರಿಹಾರದ ಬಗ್ಗೆ ಗಮನ ಸೆಳೆಯಲಾಗುವುದು. | ಕುಮಾರಸ್ವಾಮಿ, ಉಪನಿರ್ದೇಶಕರು, ತೋಟಗಾರಿಗೆ ಇಲಾಖೆ ಕೋಲಾರ