

2025 ವರುಷಗಳ ಹಿಂದೆ ಪ್ರಭು ಯೇಸು ಕ್ರಿಸ್ತರು ಬೆತ್ಲೆಹೇಮಿ ನಲ್ಲಿ ಜನಿಸಿದಾಗ ದೇವ ದೂತರು ಹಾಡಿದ ಮೊದಲ ಗಾಯನ ಮಹೋನ್ನತದಲ್ಲಿ ತಿಳಿಸಿದ್ದು ದೇವರ ಮಹಿಮೆ. ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ. ಮೃತ್ಯುಂಜಯರಾದ ಯೇಸು ಕ್ರಿಸ್ತರು ತಮ್ಮ ಶಿಷ್ಯರಿಗೆ ನೀಡಿದ ಮೊದಲ ವರದಾನ ಶಾಂತಿ. ನೂತನವಾಗಿ ಆಯ್ಕೆಯಾಗಿ ಬಂದ ಜಗದ್ಗುರು ಪೋಪ್ ಲಿಯೋ ಜನರಿಗೆ ತಮ್ಮ ಪ್ರಥಮ ದರ್ಶನದಲ್ಲಿ ನೀಡಿದ ಪ್ರಥಮ ಆಶೀರ್ವಾದ ‘ಶಾಂತಿ ನಿಮ್ಮೊಡನೆ ಇರಲಿ’ ಎಂಬುದೇ ಆಗಿದೆ. ಪ್ರತಿಯೊಬ್ಬ ಧರ್ವಧ್ಯಕ್ಷರು ಯಾವುದೇ ಧರ್ಮಕೇಂದ್ರಕ್ಕೆ ಅಧಿಕೃತವಾಗಿ ಭೇಟಿ ನೀಡಿದಾಗ ನೀಡುವ ಪ್ರಥಮ ಆಶೀರ್ವಾದವೂ ಅದೇ. ಎಲ್ಲಾ ಧರ್ಮಗಳ ಮೂಲ ಸಂದೇಶ ಶಾಂತಿ.
ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಬಯಸುವ ಅಮೂಲ್ಯವಾದ ವರ ಯಾವುದೆಂದರೆ ಶಾಂತಿ ಮತ್ತು ಸಮಾಧಾನ. ಆ ಶಾಂತಿ ಇದ್ದರೆ ಮಾತ್ರ ಆತನಿಗೆ ನೆಮ್ಮದಿಯಿಂದ ಬದುಕಲು ಸಾಧ್ಯ. ಆದರೆ ಬಹಳಷ್ಟು ಬಾರಿ ನಿಜವಾದ ಶಾಂತಿ ಸಮಾಧಾನ ಯಾವುದೆಂಬುದನ್ನು ಅರಿಯದೆ ಹಲವಾರು ಮಂದಿ ಅಧಿಕಾರ, ಪ್ರತಿಷ್ಠೆ, ಹಣ, ಪ್ರಶಸ್ತಿ, ವಸ್ತು ಇತ್ಯಾದಿಗಳ ಹಿಂದೆ ಓಡುತ್ತಾರೆ. ಕೊನೆಗೆ ನಿರಾಶರಾಗಿ ಹತಾಶರಾಗುತ್ತಾರೆ. ಇಂಥವರು ಕಸ್ತೂರಿ ಮೃಗದ ಹಾಗೆ. ಈ ಜಿಂಕೆಯಲ್ಲಿ ಕಸ್ತೂರಿ ಎಂಬ ಸುಗಂಧವಿದೆ. ಆದರೆ ಆ ಕಸ್ತೂರಿ ಮೃಗ ಕಸ್ತೂರಿ ಎಂಬ ಸುಗಂಧದ ವಸ್ತು ತನ್ನೊಳಗೆನೇ ಇದೆ ಎಂದು ಅರಿಯದೆ ಅದನ್ನು ಹುಡುಕಿ ಗುಡ್ಡಗಾಡು ಪ್ರದೇಶಗಳಲ್ಲಿ ಓಡಿ ಓಡಿ ಕೊನೆಗೆ ಸುಸ್ತಾಗಿ ಸಾಯುತ್ತದೆ. ಇದೇ ರೀತಿ ಮಾನವನು, ಪ್ರಭು ಯೇಸು ಹೇಳುವ ನಿಜವಾದ ಶಾಂತಿ ತನ್ನೊಳಗೆಯೇ ಇದೆ ಎಂದು ಅರಿಯದೇ ಹೊರಗಡೆ ಹುಡುಕಿ ಕೊನೆಗೆ ಅದು ಸಿಗದೆ ಜಿಗುಪ್ಸೆಗೊಳ್ಳುತ್ತಾನೆ. ಸಂತ ಅಗಸ್ಟಿನ್, ಈಗಿನ ಪೋಪ್ ಲಿಯೋ ಅವರ ಧಾರ್ವಿುಕ ಸಂಸ್ಥೆಯ ಸ್ಥಾಪಕರು. ಸಾಂಸಾರಿಕ ಸುಖ ಶಾಂತಿಯ ಹಿಂದೆ ಓಡಿ ನಂತರ ಹತಾಶರಾಗಿ ಪರಿವರ್ತನೆಗೊಂಡವರು.