ಶ್ರೀಕೃಷ್ಣ ಪ್ರತಿಕ್ಷಣ ನಿತ್ಯ ನೂತನ

1-67aa3528ed691
Published on
ದೇವರು ನಿತ್ಯವೂ ನೂತನ. ಒಂದು ವಸ್ತು ಇದೆ. ಅದನ್ನು ಒಂದು ಸಲ ನೋಡಿದರೆ ಆನಂದ ಆಗುತ್ತದೆ. ಎರಡನೆಯ ಬಾರಿ ನೋಡಿದಾಗ ಸ್ವಲ್ಪ ಕಡಿಮೆ ಆನಂದ. ಮೂರನೇ ಬಾರಿ ನೋಡಿದಾಗ ಇನ್ನೂ ಸ್ವಲ್ಪ ಕಡಿಮೆ. ಮತ್ತೊಮ್ಮೆನೋಡಲು ಹೋದಾಗ ನೋಡಬೇಕು ಎಂದು ಅನಿಸುವುದಿಲ್ಲ. ಅದನ್ನು ರಮಣೀಯ ಅನ್ನುವುದು ಹೇಗೆ? ಬಹಳ ರಮಣೀಯ ಎಂದು ಯಾವಾಗ ಹೇಳಬೇಕು ಎಂದರೆ ಎಷ್ಟು ಸಲ ನೋಡಿದರೂ ಅದು ಹೊಸದು ಅನ್ನಿಸುತ್ತಿರಬೇಕು. ಅದಕ್ಕೆ ರಮಣೀಯ ಎನ್ನುತ್ತಾರೆ.

ದೇವರಲ್ಲಿ ಪ್ರತಿ ಕ್ಷಣ ಹೊಸ ಹೊಸತನ ಎದ್ದು ಕಾಣಿಸುತ್ತದೆ. ಅವನ ರೂಪ ಅನಾದಿ. ನಿತ್ಯವಾದರೂ ನೋಡುವವರಿಗೆ ಅದ್ಭುತವಾದ ಹೊಸತನ ಅವನ ರೂಪದಲ್ಲಿದೆ. ಅವನಿಗೆ ಹೊಸ ಹೊಸದೇ ಸೇರುತ್ತದೆ. ಆದ್ದರಿಂದ ಅವನು ನವಪ್ರಿಯ. ಅಂತಹ ಪರಮಾತ್ಮನು ಅಕ್ರೂರನ ಜೊತೆಗೆ ಮಥುರೆಗೆ ಹೊರಡಲು ನಿಂತರೆ ಗೋಪಿಕೆಯರು ಶ್ರೀಕೃಷ್ಣನ ಮೇಲಿನ ಪ್ರೀತಿಯಿಂದ ಏಕಾಂತದಲ್ಲಿ ‘ನಿನಗೆ ನಮ್ಮ ಮೇಲೆ ಪ್ರೀತಿ ಇಲ್ಲ. ನಾವು ಎಷ್ಟು ಅತ್ತರೂ ಅದು ನಿನಗೆ ಕೇಳಿಸುವುದಿಲ್ಲ’ ಎನ್ನುತ್ತಾರೆ. ಅವರೆಲ್ಲರಿಗೂ ಪರಮಾತ್ಮ ಸಮಾಧಾನ ಹೇಳಿ ಕಳುಹಿಸಿದ್ದಾನೆ.

‘ನಾಳೆಯೇ ಹಿಂತಿರುಗಿ ಬರುತ್ತೇನೆ’ - ಮಕ್ಕಳಿಗೆ ಏನಾದರೂ ಸಾಮಾನು ಕೊಡಿಸಬೇಕು ಎಂದಾಗ ನಾಳೆ ನಾಳೆ ಎಂದು ಸಮಾಧಾನ ಪಡಿಸುವಂತೆ - ಎಂದು ಆಶ್ವಾಸನೆ ನೀಡಿ ಹೊರಟಿದ್ದಾನೆ. ಮೊದಲು ರಥ. ರಥದ ಧ್ವಜ ಕಾಣಿಸುತ್ತದೆ ರಥ ಕಾಣಿಸುತ್ತಿರುವವರೆಗೆ ಕೃಷ್ಣ ಇಲ್ಲಿಯೇ ಇದ್ದಾನೆ ಎಂದು ನಂಬಿದ್ದರು. ಯಾವಾಗ ರಥ ತಿರುಗಿತೋ ಆಗ ರಥದ ಮೇಲ್ಬಾಗ ಮಾತ್ರ ಕಾಣಿಸಲು ಆರಂಭವಾಯಿತು. ನಂತರ ಧ್ವಜ ಮಾತ್ರ ಕಾಣಿಸಿತು. ಕೊನೆಗೆ ರಥದ ಧ್ವಜವೂ ಮುಚ್ಚಿಹೋಗಿದೆ. ಕೇವಲ ಧೂಳಿ ಮಾತ್ರ ಕಾಣಿಸುತ್ತಿದೆ.

ಇದು ಶ್ರೀಕೃಷ್ಣನ ರಥದಿಂದ ಬಂದ ಧೂಳಿ ಎಂದು ಭಕ್ತಿಯಿಂದ ಕಾಣುತ್ತಿದ್ದಾರೆ. ಆ ಗೋಪಿಕೆಯರೆಲ್ಲ ಚಿತ್ರದಲ್ಲಿರುವ ಗೊಂಬೆಯಂತೆ ಸ್ತಬ್ಧರಾಗಿ ನಿಂತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net