ಲಂಚ ಕೊಟ್ಟರಷ್ಟೇ ಇ-ಸ್ವತ್ತು!; ಪ್ರತಿ ಸೈಟಿಗೆ 15-25 ಸಾವಿರ ರೂ. ಫಿಕ್ಸ್, ಗ್ರಾಮಪಂಚಾಯತ್​ಗಳಲ್ಲಿ ಹಗಲು ದರೋಡೆ

Front
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಡಿಜಿಟಲ್ ರೂಪ ನೀಡಿ, ಆನ್​ಲೈನ್ ಸೇವೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಇ-ಸ್ವತ್ತು’ (ಇ-ಖಾತಾ) ಯೋಜನೆ ಲಂಚ ಕೊಟ್ಟವರಿಗಷ್ಟೇ ಸೀಮಿತವಾದ ಸ್ವತ್ತಾಗುತ್ತಿದೆ! ಇದರಿಂದಾಗಿ ಜನಸಾಮಾನ್ಯರಿಗೆ ಇ-ಖಾತಾ ಸೌಲಭ್ಯ ಕೈಗೆಟುಕದಂತಾಗಿದೆ. ಲಂಚದ ಬೇಡಿಕೆಯಿಂದಾಗಿ ಗ್ರಾಮ ಠಾಣಾದಲ್ಲಿ ನೆಲೆಸಿರುವ ರೈತಾಪಿ ಜನರು ಪಿತ್ರಾರ್ಜಿತ ಆಸ್ತಿಗೂ ಇ-ಖಾತಾ ಪಡೆಯಲಾಗುತ್ತಿಲ್ಲ. ಗ್ರಾಮ ಠಾಣಾ ಮತ್ತು ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದಿಸಿ ಅಭಿವೃದ್ಧಿ ಪಡಿಸಿರುವ ಹೊಸ ಬಡಾವಣೆಗಳ ನಿವೇಶನಗಳಿಗೆ ಪಂಚತಂತ್ರ ತಂತ್ರಾಂಶದಲ್ಲಿ ಇ-ಸ್ವತ್ತು ಅನ್ವಯ ಪ್ರತಿ ಪಂಚಾಯಿತಿ 9 ಆಂಡ್ 11ಎ ಖಾತಾ ನೀಡಬೇಕು. 2013ರ ಒಳಗೆ ಅಭಿವೃದ್ಧಿ ಆಗಿರುವ ಲೇಔಟ್​ಗಳು ಅಥವಾ ಮನೆಗಳಿಗೆ ವಿದ್ಯುತ್ ಬಿಲ್ ಅಥವಾ ಸೇಲ್ ಡೀಡ್ ಸ್ವೀಕರಿಸಿ 11ಬಿ ಖಾತಾ ವಿತರಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.

ವರ್ಷಗಟ್ಟಲೆ ಅಲೆದಾಟ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಗಳೂರು ಸೇರಿದಂತೆ ವೇಗವಾಗಿ ಬೆಳೆಯುತ್ತಿರುವ ನಗರಗಳ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಕೊಡಲು ಕನಿಷ್ಠ 15 ಸಾವಿರ ರೂ.ನಿಂದ 25 ಸಾವಿರ ರೂ. ಫಿಕ್ಸ್ ಮಾಡಿದ್ದಾರೆ. ಹಣ ಕೊಟ್ಟರೆ ಸೂಕ್ತ ದಾಖಲೆ ಇಲ್ಲದಿದ್ದರೂ ಇ-ಸ್ವತ್ತಿನಲ್ಲಿ ಇ-ಖಾತಾ ಮಾಡಿಕೊಡುತ್ತಾರೆ. ಲಂಚ ಕೊಡದಿದ್ದರೆ 45 ದಿನಗಳಲ್ಲಿ ಆಗಬೇಕಿದ್ದ ಕೆಲಸಕ್ಕೆ ವರ್ಷಗಟ್ಟಲೇ ಸಮಯ ತೆಗೆದುಕೊಂಡು ಆಸ್ತಿ ಮಾಲೀಕರನ್ನು ಅಲೆದಾಡಿಸುತ್ತಾರೆ.

ಕರ ವಸೂಲಿಗಾರರ ದರ್ಬಾರು: ಗ್ರಾಮ ಪಂಚಾಯಿತಿಯಲ್ಲಿ ಕರ ವಸೂಲಿಗಾರರದ್ದೇ ದರ್ಬಾರಾಗಿದೆ. ಪ್ರತಿ ಮನೆ ಮತ್ತು ನಿವೇಶನ ಮಾಲೀಕರಿಂದ ತೆರಿಗೆ ಸಂಗ್ರಹಿಸುವ ಜವಾಬ್ದಾರಿ ಹೊಂದಿರುವ ಕರ ವಸೂಲಿಗಾರರು, ಇ-ಸ್ವತ್ತು ಖಾತಾ ಮಾಡಿಸಿಕೊಡುವ ಅಕ್ರಮ ಗುತ್ತಿಗೆ ಪಡೆದಿದ್ದಾರೆ. ಆಸ್ತಿ ಮಾಲೀಕರಿಂದ ಇಂತಿಷ್ಟೇ ಹಣ ಫಿಕ್ಸ್ ಮಾಡುತ್ತಾರೆ. ಒಂದು ವೇಳೆ ಕೇಳಿದಷ್ಟು ಹಣ ಕೊಡದೆ ಇದ್ದರೇ ಅರ್ಜಿ ಮುಂದೆ ಸಾಗುವುದಿಲ್ಲ. ಹೊಸ ಲೇಔಟ್ ನಿರ್ಮಾಣ ಆಗುತ್ತಿರುವ ಪಂಚಾಯಿತಿಗಳಲ್ಲೇ ದಂಧೆ ನಡೆಯುವುದು ಹೆಚ್ಚು.

ಅನಗತ್ಯ ಲಾಗಿನ್, ತಪ್ಪಾಗಿ ನಮೂದು: ಇ-ಸ್ವತ್ತು ಅಡಿ ಇ-ಖಾತಾ ಪಡೆಯಲು ಲಂಚ ಕೊಡದಿದ್ದರೆ ಅನಗತ್ಯ ತೊಂದರೆ ಕೊಡುವ ಉದ್ದೇಶಕ್ಕೆ ಪಿಡಿಒಗಳ ಜತೆಗೆ ಎಲ್ಲ ಅಧಿಕಾರಿಗಳು ಲಾಗಿನ್​ಗೆ ಅರ್ಜಿ ವರ್ಗಾವಣೆ ಮಾಡಿ ವಿಳಂಬ ಮಾಡುತ್ತಾರೆ. ಇ-ಖಾತಾದಲ್ಲಿ ಮಾಲೀಕನ ಹೆಸರು, ಅಳತೆ, ಸ್ವತ್ತಿನ ಪ್ರಕಾರ ಯಾವುದಾದರೂ ಒಂದು ಮಾಹಿತಿಯನ್ನು ತಪ್ಪಾಗಿ ನಮೂದು ಮಾಡುತ್ತಾರೆ. ಮತ್ತೆ ಅದನ್ನು ತಿದ್ದುಪಡಿ ಮಾಡಬೇಕಾದರೆ 45 ದಿನಗಳು ಬೇಕಾಗುತ್ತದೆ.

ಏನಿದೆ ನಿಯಮ?: ಇ-ಖಾತಾ ಕೊಡುವ ಜವಾಬ್ದಾರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ವಹಿಸಲಾಗಿದೆ. ಮಾಲೀಕನ ಫೋಟೋ, ಐಡಿ ಕಾರ್ಡ್, ಪಹಣಿ, ತೆರಿಗೆ ರಸೀದಿ, ಕಟ್ಟಡ ಅಥವಾ ನಿವೇಶನದ ಫೋಟೋ ಕೊಟ್ಟು ಚಕ್ಕುಬಂದಿ ಪಡೆಯಬೇಕು. ದ್ವಿತೀಯ ದರ್ಜೆ ಸಹಾಯಕ ಅಥವಾ ಕಾರ್ಯದರ್ಶಿ ಅರ್ಜಿ ಪಡೆದು ಇ-ಸ್ವತ್ತು ತಂತ್ರಾಂಶದಲ್ಲಿ ಅರ್ಜಿ ಅಪ್​ಲೋಡ್ ಮಾಡಿ ಶುಲ್ಕ 50 ರೂ. ಪಡೆಯಬೇಕು. ಅರ್ಜಿ ಪಡೆದು 45 ದಿನಗಳಲ್ಲಿ ಇ-ಖಾತಾ ಪೂರ್ಣಗೊಳಿಸಬೇಕು. ಒಂದು ವೇಳೆ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ ಅಥವಾ ನಿವೇಶನ ಇದ್ದರೆ ಮೋಜಣಿಯಲ್ಲಿ ನಕ್ಷೆಗೆ ಅರ್ಜಿ ಸಲ್ಲಿಸಿ ಆಸ್ತಿ ಮಾಲೀಕರಿಗೆ ಶುಲ್ಕ ಪಾವತಿಗೆ ಸೂಚಿಸಬೇಕು. ನಾಡ ಕಚೇರಿಯಲ್ಲಿ ಮೋಜಣಿಗೆ 800 ರೂ. ಶುಲ್ಕ ಪಾವತಿಸಿದರೆ ತಾಲ್ಲೂಕು ಸರ್ವೆ ಅಧಿಕಾರಿ, ಖುದ್ದು ಸ್ಥಳಕ್ಕೆ ಬಂದು ಅಳತೆ ಮಾಡಿ ನಕ್ಷೆ ಸಿದ್ಧಪಡಿಸಿ ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡುತ್ತಾರೆ. ಆನಂತರ 21 ದಿನಗಳ ಒಳಗೆ ಇ-ಸ್ವತ್ತು ಖಾತಾ ಕೊಡಬೇಕೆಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ.

ವಂಚನೆಗೂ ಅಡ್ಡಮಾರ್ಗ: ಅರ್ಜಿಯ ಜತೆಗೆ ಕಟ್ಟಡದ ಅಥವಾ ನಿವೇಶನದ ಫೋಟೋ ಪಡೆಯಬೇಕು. ಖುದ್ದು ಪಿಡಿಒ ಸ್ಥಳ ಮಹಜರ್ ಮಾಡಬೇಕು. ತಾಲೂಕು ಸರ್ವೆ ನಕ್ಷೆ ಅಥವಾ ಲೇಔಟ್ ನಕ್ಷೆ ಪಡೆಯುತ್ತಾರೆ. ಕೊನೆಗೆ ಇ-ಸ್ವತ್ತು ಕೊಡುವ ಸಮಯದಲ್ಲಿ ವಸತಿ ಎಂದು ಉಲ್ಲೇಖಿಸಿ ಸ್ವತ್ತಿನ ಪ್ರಕಾರ ಕಾಲಂನಲ್ಲಿ ಕಟ್ಟಡದ ಬದಲಿಗೆ ಸೈಟ್ ಎಂದು ಉಲ್ಲೇಖಿಸುತ್ತಾರೆ. ಆಸ್ತಿ ಮಾಲೀಕನಿಂದ ಕಟ್ಟಡಕ್ಕೆಂದು ತೆರಿಗೆ ವಸೂಲಿ ಮಾಡಿ ಸರ್ಕಾರಕ್ಕೆ ಸೈಟ್ ಲೆಕ್ಕದಲ್ಲಿ ಜಮೆ ಮಾಡುತ್ತಿದ್ದಾರೆ. ಕೈ ಬರಹದಲ್ಲಿ ತೆರಿಗೆ ರಸೀದಿ ಕೊಡುವ ಕಾರಣ ಕರ ವಸೂಲಿಗಾರರು ಸುಲಭವಾಗಿ ತೆರಿಗೆ ವಂಚಿಸಲು ಅವಕಾಶ ಕಲ್ಪಿಸಿದಂತಾಗಿದೆ.

ಇ-ಸ್ವತ್ತು ಅಗತ್ಯ ಏಕೆ?: ಹಳ್ಳಿಗಳಲ್ಲಿ ಇರುವ ಸೈಟು, ಮನೆ, ಕಟ್ಟಡಗಳಿಗೆ ಇ-ಖಾತಾ ಮುಖ್ಯವಾಗಿವೆ. ಇಲ್ಲವಾದರೆ, ಕಾನೂನಡಿ ಮಾನ್ಯತೆ ಇರುವುದಿಲ್ಲ. ಉಪ ನೋಂದಣಿ ಕಚೇರಿಯಲ್ಲಿ ಸುಲಭವಾಗಿ ನೋಂದಾ ಯಿಸಬಹುದು. ಇ-ಸ್ವತ್ತು ಇಲ್ಲವಾದರೆ, ದಾನಪತ್ರ, ಸೇಲ್ ಡೀಡ್, ಬ್ಯಾಂಕ್ ಸಾಲ, ಹಕ್ಕು ಬಿಡುಗಡೆ ಪತ್ರ ಇನ್ನಿತರ ಕರಾರುಗಳನ್ನು ಉಪ ನೋಂದಣಿ ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಇ-ಸ್ವತ್ತು ಕಡ್ಡಾಯ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net