ಕೆಲವೊಮ್ಮೆ ಇದು ಆವಶ್ಯಕ. ಬೇರೆ ಸಮಯಗಳಲ್ಲಿ ಎಲ್ಲರೊಡನೆಯೂ ಸಂಬಂಧಪಡಬೇಕು ಮತ್ತು ಎಲ್ಲರ ಬಗ್ಗೆಯೂ ನಿಜವಾದ ಆದರವನ್ನು ತೋರಬೇಕು. ಆದರವನ್ನು ತೋರುವುದೆಂದರೆ, ನಿಮಗಾಗಿ ನಾನೇನು ಮಾಡಲಿ? ನಿಮಗೆ ನಾನು ಹೇಗೆ ಸಹಾಯ ಮಾಡಲಿ? ನೀವು ಹೇಗಿದ್ದೀರಿ? ಸಂತೋಷವಾಗಿದ್ದೀರೆ? ಎಂದು ಕೇಳುವುದು. ಈ ಪ್ರಶ್ನೆಗಳಿಂದಾಗಿ ಎಲ್ಲರೊಡನೆಯೂ ಸಂಬಂಧವನ್ನು ಕಲ್ಪಿಸಿಕೊಳ್ಳಬಹುದು. ನಿಮ್ಮನ್ನು ದುಃಖಿಗಳನ್ನಾಗಿ ಮಾಡುವ ಬೇರೆ ರೀತಿಯ ಪ್ರಶ್ನೆಗಳಿವೆ. ನನಗೆ ಹೀಗೇಕೆ ಆಗುತ್ತಿದೆ?, ನನ್ನ ಮೇಲೆ ಯಾರೂ ಏಕೆ ಅಕ್ಕರೆಯನ್ನು ತೋರುವುದಿಲ್ಲ?. ಈ ರೀತಿಯ ಪ್ರಶ್ನೆಗಳು ದುಃಖವನ್ನೆ ತರುತ್ತವೆ. ಇನ್ನೂ ಕೆಲವು ಪ್ರಶ್ನೆಗಳಿಗೆ ನೀವು ಗಂಭೀರವಾಗಿ ಉತ್ತರಗಳನ್ನು ಹುಡುಕುತ್ತಿರುತ್ತೀರಿ.
ಕೇವಲ ಮುಳ್ಳುಗಳನ್ನೆ ನೋಡುತ್ತಿದ್ದರೆ ಸುಂದರವಾದ ಹೂವನ್ನು ನೋಡುವುದು ಯಾವಾಗ? ಮುಳ್ಳಾದ ಬಬೂಲ್ ಮರ ಸಹ ಹೂಗಳನ್ನು ಬಿಡುತ್ತದೆ ಮತ್ತು ಅವು ಬಲು ಸುಂದರವಾಗಿ ಕಾಣುತ್ತವೆ. ಜಗತ್ತು ಮುಳ್ಳಿನ ಬಬೂಲ್ನಂತಾದರೂ ಅದರ ಶಾಖೆಗಳಲ್ಲಿ ಕೆಲವು ಸುಂದರವಾದ ಹೂಗಳಿನ್ನೂ ಇವೆ. ಈ ಸುಂದರವಾದ ಹೂಗಳ ಮೇಲೆ ನಿಮ್ಮ ದೃಷ್ಟಿ, ಗಮನ ಹರಿಯಲಿ. ಉಳಿದ ಎಲ್ಲವನ್ನೂ ಮರೆತುಬಿಡಿ. ನಿಮಗೆ ಹಾನಿಯನ್ನುಂಟು ಮಾಡಿ, ನಿಮ್ಮನ್ನು ನೋಯಿಸುತ್ತಿರುವ ನಕಾರಾತ್ಮಕತೆ ಮತ್ತು ಜಡತೆಯಿಂದ ಹೊರಬನ್ನಿ. ನಿಮ್ಮ ಸುತ್ತಲೂ ಮಲ, ನಕಾರಾತ್ಮಕತೆ ಅಥವಾ ಅಜ್ಞಾನವಿದ್ದರೂ ನಿಮ್ಮ ಅಂತರಾಳದಿಂದ ಅರಳುವ ಯತ್ನವನ್ನು ಮಾಡಬೇಕು. ಕೊಳವು ಕೊಳಕಾಗಿದ್ದರೂ ಸುಂದರವಾದ ತಾವರೆಯನ್ನು ಅರಳಿಸುತ್ತದೆ. ಜಗತ್ತು ಹೀಗಿದೆ ಎಂದುಕೊಂಡು ನಿಮಗೇ ಕಷ್ಟವನ್ನು ಕೊಟ್ಟುಕೊಳ್ಳಬೇಡಿ. ಅದರ ಬದಲಿಗೆ ನಿಮ್ಮ ಒಳ್ಳೆಯ ಗುಣಗಳು ನಿಮ್ಮ ಅಂತರಾಳದಿಂದ ಅರಳುವ ಬಗ್ಗೆ ಗಮನವನ್ನು ಕೊಡಿ.
ನಿಮಗೆ ಬೇಕಿರುವುದೆಲ್ಲವೂ ಇಲ್ಲಿದೆ, ಈಗ ನೀವೆಲ್ಲಿ ಇರುವಿರೊ, ಅಲ್ಲಿಯೆ ಇದೆ. ನನ್ನ ಆತ್ಮೀಯರೆ, ಅದರ ಮೇಲೆ ಸ್ವಲ್ಪ ಗಮನ ಹರಿಸಿ, ನಿಮ್ಮ ದೃಷ್ಟಿಯನ್ನು ತೆಗೆದುಕೊಂಡು ಬನ್ನಿ. ನಿಮಗೆ ಸಿಗುವುದನ್ನು ಕಂಡು ಆಶ್ಚರ್ಯ ಪಡುತ್ತೀರಿ. ಮುಳ್ಳಿನ ಕಂಬಳಿಯ ಬದಲಿಗೆ ಸುಗಂಧಯುತವಾದ ಹೂವಿನ ತೋಟವನ್ನೆ ಕಾಣುವಿರಿ. ಆಗ ನಿಮ್ಮ ಸುತ್ತಲೂ ಇರುವ ಕಸ, ಮಲವನ್ನು ಕಾಣದೆ, ನಿಮ್ಮ ಸುತ್ತಲೂ ಸೌಂದರ್ಯವನ್ನೆ ಕಾಣುತ್ತೀರಿ. ಹಿಂಸಾಚಾರದ ಬದಲಿಗೆ, ಜಗತ್ತಿನಲ್ಲಿ ಪ್ರಶಾಂತತೆಯನ್ನು, ಸೌಂದರ್ಯವನ್ನು ಕಾಣುತ್ತೀರಿ. ಹೌದು, ಖಂಡಿತವಾಗಿಯೂ ಇಂದಿನ ಜಗತ್ತಿನಲ್ಲಿ ಒತ್ತಡ ಮತ್ತು ಘರ್ಷಣೆಗಳಿವೆ. ಆದರೆ ಜಗತ್ತಿನಲ್ಲಿ ಇಷ್ಟು ಮಾತ್ರವೇ ಇಲ್ಲ. ನಗುತ್ತಿರುವ ಮಕ್ಕಳನ್ನು ನೋಡಿ, ನಿಮ್ಮ ಸುತ್ತಲೂ ಅರಳುತ್ತಿರುವ ಹೂಗಳನ್ನು ನೋಡಿ. ಈ ಜಗತ್ತಿನಲ್ಲಿ ಅನೇಕ ಒಳ್ಳೆಯವರಿದ್ದಾರೆ.
ದ್ವಾಪರಯುಗದಲ್ಲಿ ಮಾತ್ರ ದುಷ್ಟತನ ಮತ್ತು ನಕಾರಾತ್ಮಕತೆಯನ್ನು ಪ್ರತಿನಿಧಿಸುತ್ತಿದ್ದ 100 ಕೌರವರಿದ್ದರು ಮತ್ತು ಸಕಾರಾತ್ಮಕತೆ ಹಾಗೂ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತಿದ್ದ ಐವರು ಪಾಂಡವರು ಮಾತ್ರ ಇದ್ದರು. ಆದರೆ ಇಂದು ಐದೇ ಐದು ಕೌರವರಿದ್ದಾರೆ ಮತ್ತು 100 ಪಾಂಡವರಿದ್ದಾರೆ. ಈ ಕಲಿಯುಗದಲ್ಲಿ ನಕಾರಾತ್ಮಕತೆ ಮತ್ತು ದೋಷಗಳಿಗಾಗಿ ಮಾತ್ರ ಹುಡುಕುತ್ತಾ ಹೋದರೆ, ನಿಮಗೆ ಅವುಗಳು ಮಾತ್ರ ಕಾಣಿಸುತ್ತವೆ. ನಿಮ್ಮ ಸುತ್ತಲೂ ಇರುವವರನ್ನು ದೂಷಿಸುವುದನ್ನು ನಿಲ್ಲಿಸಿ, ಅದರ ಬದಲಿಗೆ ನಿಮ್ಮ ಕುಂದುಕೊರತೆಗಳ ಬಗ್ಗೆ ಗಮನ ನೀಡಿ. ನಿಮ್ಮ ಮನಸ್ಸು ಎಷ್ಟು ಕೊಳೆತು ಹೋಗಿದೆಯೆಂದು ನೋಡಿ. ಅದಕ್ಕೆ ಮೊದಲು ಗಮನವನ್ನು ನೀಡಬೇಕಾಗಿದೆ. ಆಗ ನಿಮ್ಮ ಸುತ್ತಲೂ ಇರುವ ಕಸದಲ್ಲೂ ಹೂಗಳು ಅರಳುತ್ತಿರುವುದನ್ನು ಕಾಣುವಿರಿ. ಇತರರಲ್ಲಿ ಕೇವಲ ಕುಂದುಕೊರತೆಗಳನ್ನು ಪೋಷಿಸುವಂತಹ ಬುದ್ಧಿಯನ್ನು ಪೋಷಿಸಬೇಡಿ. ಯಾರಲ್ಲಿ ಕುಂದುಕೊರತೆಗಳು, ದೋಷಗಳು ಇಲ್ಲವೆಂದು ಹೇಳಿ? ಕೇವಲ ನಕಾರಾತ್ಮಕ ಮನಸ್ಥಿತಿಯಿಂದ ದೋಷಗಳ ಬಗ್ಗೆಯೆ ದೂರುತ್ತಲಿದ್ದರೆ ನಿಮ್ಮಲ್ಲೂ ಅದೇ ತುಂಬಿ ಬಿಡುತ್ತದೆ.
ಯಾರಾದರೂ ಜೋರಾಗಿ ಅರಚುತ್ತಿದ್ದು, ಹಲ್ಲುಗಳನ್ನು ಮಸೆಯುತ್ತಿದ್ದು, ಕೆಂಪು ಕಣಿ ್ಣಂದ, ಮುಷ್ಠಿ ಬಿಗಿದಿದ್ದು, ಗಂಟಲಿನ ನರಗಳೆಲ್ಲವೂ ಎದ್ದು ಕಾಣುತ್ತಿದ್ದರೆ, ಅವರು ನೋಡಲು ವಿನೋದಮಯವಾಗಿರುತ್ತಾರೆ! ಇಲ್ಲವಾದರೆ ಇಡೀ ಜಗತ್ತು ಮಂಕಾಗಿರುತ್ತದೆ. ಮಕ್ಕಳ ಕೋಪದಲ್ಲೂ, ಅಳುವಿನಲ್ಲೂ ಸೌಂದರ್ಯವಿದೆ. ಕಣ್ತೆರೆದು ನೋಡಿ, ಸರ್ವವ್ಯಾಪಿಯಾದ ಸೌಂದರ್ಯವಿದೆ, ಅಸ್ತಿತ್ವವಿದೆ.