ವಿದೇಶದಲ್ಲಿ ಹೇಗಿದೆ ಕರೊನಾ?: ಕರೊನಾ ವೈರಸ್ ಬಗ್ಗೆ ಹೊರದೇಶದಲ್ಲಿರುವ ಕನ್ನಡಿಗರ ನೇರ ಅವಲೋಕನ

corona in uk mar 20
Published on

ಸಂಕಷ್ಟದ ದಿನಗಳು ಮುಂದೆ ಬರಲಿವೆ 

ಡಾ. ನೀರಜ್ ಪಾಟೀಲ್ ಲ್ಯಾಂಬೆತ್​ನ ಮಾಜಿ ಮೇಯರ್

ನಾನೀಗ ಲಂಡನ್ನಿನ ಅಪಘಾತ ಹಾಗೂ ತುರ್ತು ವೈದ್ಯಕೀಯ ವಿಭಾಗದ ನೇತೃತ್ವ ವಹಿಸಿದ್ದು, ಕರೊನಾ ರೋಗಿಗಳ ಶುಶ್ರೂಷೆ ಹೊಣೆ ಹೊತ್ತಿದ್ದೇನೆ. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಔಷಧದ ಸಂಶೋಧನೆ ಅತ್ಯಂತ ತ್ವರಿತಗತಿಯಲ್ಲಿ ನಡೆದಿದೆ. ಪ್ರಾಣಿಗಳ ಮೇಲೆ ಪ್ರಯೋಗ ನಡೆಯುತ್ತಿದೆ. ಕ್ಲೋರೋಕ್ವಿನ್ ಎಂಬ ಔಷಧಿಯು ಪ್ರಾಣಿಗಳಲ್ಲಿ ವೈರಸ್ ಕೊಲ್ಲುವಲ್ಲಿ ಯಶಸ್ವಿಯಾಗಿದೆ. ರೆಮ್ೆಸ್​ವಿರ್ ಸಹ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಮತ್ತಷ್ಟು ಪರೀಕ್ಷೆ ನಡೆಯುವ ಅವಶ್ಯಕತೆಯಿದೆ. ಎಚ್​ಐವಿ ವಿರೋಧಿ ಔಷಧಗಳು ಕರೊನಾ ತಡೆಗಟ್ಟುವಲ್ಲಿ ವಿಫಲವಾಗಿವೆ. ಹೀಗೆ ಸಂಶೋಧನೆ ಮುಂದುವರಿದಿದೆ.ಇಷ್ಟೆಲ್ಲದರ ನಡುವೆಯೂ ಇಲ್ಲಿನ ಪರಿಸ್ಥಿತಿ ತೀರಾ ಸಂಕಷ್ಟದಲ್ಲಿದೆ. ಭಾರತೀಯರು ಸೇರಿ ದೇಶವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಈಗಾಗಲೆ 3 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಂಡು 60 ಜನ ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ತೀರಾ ಹದಗೆಡುವ ಆತಂಕ ಇದೆ. ಸೋಂಕು ಹರಡದಂತೆ ತಡೆಗಟ್ಟಲು ಮೂರು ಹಂತದ ಕ್ರಮಕೈಗೊಂಡಿದ್ದೇವೆ. ಪ್ರಾಥಮಿಕ ಹಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮದುವೆ ಸೇರಿದಂತೆ ಜನಜಂಗುಳಿಯ ಕಾರ್ಯಕ್ರಮ ರದ್ದುಪಡಿಸುವುದು, ಪರಸ್ಪರ ಸಂಪರ್ಕ ಕಡಿತ ಮಾಡುವುದು. ದ್ವಿತೀಯ ಹಂತದಲ್ಲಿ, 37.8 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ಉಷ್ಣಾಂಶ ಹಾಗೂ ಒಣಕೆಮ್ಮು ಉಳ್ಳವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ತಪಾಸಣೆ ನಡೆಸುವುದು, ಅವರನ್ನು ಬೇರೆಯವರಿಂದ ಪ್ರತ್ಯೇಕಿಸಿ ಶುಶ್ರೂಷೆ ಮಾಡುವುದು. ತೃತೀಯ ಹಂತದಲ್ಲಿ, ಬೃಹತ್ ಸಂಖ್ಯೆಯಲ್ಲಿ ವೃದ್ಧರು ಸೋಂಕಿಗೆ ಒಳಗಾಗುವ ಅಂದಾಜಿದೆ. ಇದಕ್ಕಾಗಿ ಸುಮಾರು 5 ಸಾವಿರ ತುರ್ತು ಶುಶ್ರೂಷಾ ಘಟಕದ(ಐಟಿಯು) ಅಗತ್ಯವಿದೆ. ಭಾರತದಲ್ಲಿ ಈಗಿನಿಂದಲೇ ಎಲ್ಲ ಮುನ್ನೆಚ್ಚರಿಕೆ ಕೈಗೊಂಡಿದ್ದೇ ಆದಲ್ಲಿ ಸಾವು ನೋವುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.

ಯುಕೆಯಲ್ಲಿ 3 ತಿಂಗಳು ಗೃಹಬಂಧನ

ಡಾ. ಶ್ರೀಭವಾನಿ ರಾಕೇಶ್ ಫಾರ್ಮಸಿ ಶಿಕ್ಷಕಿ, ಮ್ಯಾಂಚೆಸ್ಟರ್

ಯುಕೆಯಲ್ಲಿ ಕರೊನಾ ವೈರಸ್ ಕ್ಷಿಪ್ರವಾಗಿ ಹರಡುತ್ತಿದೆ. ಇಲ್ಲಿನ ಸರ್ಕಾರ ನಿಧಾನ ಗತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಹೊಂದಿಲ್ಲ. ಅಗತ್ಯ ಆಹಾರ ಪದಾರ್ಥಗಳ ಪೂರೈಕೆ ಇಲ್ಲದೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಅಲ್ಲದೇ 3 ತಿಂಗಳು ಕ್ವಾರಂಟೈನ್​ನಲ್ಲಿ ಇರಿಸುವುದಾಗಿ ತಿಳಿಸಿದೆ. ವಯಸ್ಸಾದವರು ಕಡ್ಡಾಯವಾಗಿ ಮನೆಯಿಂದ ಹೊರಗೆ ಹೋಗದಂತೆ ಸೂಚಿಸಲಾಗಿದೆ. ಮ್ಯಾಂಚೆಸ್ಟರ್​ನಲ್ಲಿ ಒಂದೇ ಒಂದು ಭಾರತೀಯ ಮಳಿಗೆ ಇದೆ. ಮುಂದಿನ ತಿಂಗಳು ಆಹಾರ ಧಾನ್ಯ ಸಿಗುವುದಿಲ್ಲ ಎಂಬ ಸಂದೇಶದ ಹಿನ್ನೆಲೆಯಲ್ಲಿ ಜನ ಖರೀದಿಗೆ ಮುಗಿ ಬಿದ್ದಿದ್ದಾರೆ. ಕೆಲ ಮಳಿಗೆಗಳಲ್ಲಿ ಒಬ್ಬರಿಗೆ 2 ಪದಾರ್ಥ ಮಾತ್ರ ಖರೀದಿಸಲು ಅವಕಾಶ ಎಂದು ಫಲಕ ಹಾಕಲಾಗಿದೆ. ನರ್ಸರಿ ಶಾಲೆಗಳನ್ನು ಮಾತ್ರ ಮುಚ್ಚಲಾಗಿದೆ. ಕರೊನಾ ಪ್ರಕರಣಗಳು ಪತ್ತೆಯಾದ ಬಳಿಕ ದೇವಸ್ಥಾನಗಳು, ಪಬ್, ರೆಸ್ಟೋರೆಂಟ್, ಸಿನಿಮಾ ಥಿಯೇಟರ್​ಗಳನ್ನು ಬಂದ್ ಮಾಡಲಾಗಿದೆ. ಇದರ ಮಧ್ಯೆ ವೈದ್ಯಕೀಯ ಸಿಬ್ಬಂದಿ ಎಂದೇಳಿಕೊಂಡು ಪರೀಕ್ಷೆ ಹೆಸರಲ್ಲಿ ಮನೆಗೆ ಬರುವ ಕೆಲ ದುಷ್ಕರ್ವಿುಗಳು ವಯಸ್ಸಾದವರನ್ನು ಬೆದರಿಸಿ ದರೋಡೆ ಮಾಡುತ್ತಿದ್ದಾರೆ. ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ದುಸ್ತರವಾಗುತ್ತದೆ. ವೈದ್ಯಕೀಯ ಸಲಕರಣೆ ಹಾಗೂ ಅಗತ್ಯ ಆಹಾರ ಪದಾರ್ಥಗಳ ಪೂರೈಕೆಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು. ಯುಕೆಯಲ್ಲಿ ಸಾಕಷ್ಟು ಭಾರತೀಯರಿದ್ದು, ಎಲ್ಲರೂ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಅತಿ ಭಯ ಬೇಡ, ಜಾಗರೂಕರಾಗಿರಿ

ಸಿಎ ನಿತಿನ್ ಮಹದೇವಪ್ಪ

ನಾನು ಮತ್ತು ನನ್ನ ಗೆಳೆಯ ನಿಗದಿಯಾಗಿದ್ದಂತೆ ಕಾರ್ಯನಿಮಿತ್ತ ನ್ಯೂಜಿಲೆಂಡ್​ಗೆ ಹೋಗಬೇಕಿತ್ತು, ಇದೇ ಮಾರ್ಚ್ 8ರಂದು, ಆಗ ಶುರುವಾಗಿದ್ದೆ ಕರೊನಾ ಭಯ, ಸ್ನೇಹಿತರು, ಸಂಬಂಧಿಗಳ ಎಚ್ಚರಿಕೆಯ ಮಧ್ಯೆಯೂ ಸರಿ ಎಂದು ಹೊರಟಿದ್ದಾಯಿತು, ದಾರಿಯುದ್ದಕ್ಕು ಎಲ್ಲ ವಿಮಾನ ನಿಲ್ದಾಣಗಳು ಖಾಲಿ ಹೊಡೆಯುತ್ತಿದ್ದವು. ಬೆಂಗಳೂರು - ಸಿಂಗಾಪುರ-ಆಕ್ಲೆಂಡ್ ಮಾರ್ಗವಾಗಿ ಕ್ರಿಸ್ಟ್ ಚರ್ಚ್ ತಲುಪಿದ್ದಾಯಿತು. ನ್ಯೂಜಿಲೆಂಡ್​ನ ಸುಂದರ ಪರಿಸರದಲ್ಲಿ ನಿಸರ್ಗದ ನಡುವೆ ಹತ್ತು ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ನ್ಯೂಜಿಲೆಂಡ್​ನಲ್ಲಿ ಹೊರಹೋಗುವ ವಿಮಾನಗಳಿಗೆ ಮಾತ್ರ ಅವಕಾಶ ಒಳಬರುವ ವಿಮಾನಗಳಿಗೆ ಪ್ರವೇಶವಿರಲಿಲ್ಲ. ನ್ಯೂಜಿಲೆಂಡ್​ನಲ್ಲಿ ಹತ್ತು ದಿನವಿರುವವರೆಗೂ ಯಾವುದೇ ನಗರಗಳಲ್ಲಿ ಕರೊನಾ ಸ್ಕಿ›ೕನಿಂಗ್ ಇರಲಿಲ್ಲ. ಹಿಂತಿರುಗುವ ದಿನ ಅಂದರೆ ಮಾರ್ಚ್ 18ರಂದು ಅದೇ ಮಾರ್ಗವಾಗಿ ವಿಮಾನ ಪ್ರಯಾಣ. ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ತಪಾಸಣೆಗೆ ಒಳಪಡಿಸಿ ನಮ್ಮನ್ನು ಸಂಪೂರ್ಣ ಆರೋಗ್ಯಕರರೆಂದು ಹೇಳಿದರು. ಇದರಿಂದ ಭಾರತಕ್ಕೆ ಹಿಂದಿರುಗಲು ಉತ್ಸಾಹ ಬಂದಂತಾಯಿತು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಳಿದಾಗ ಇಲ್ಲೂ ಖಾಲಿ ಖಾಲಿ ವಾತಾವರಣ, ಆತಂಕದ ನಡುವೆಯೂ ತಪಾಸಣೆಯಲ್ಲಿ ಪಾಸು. ಸುಮಾರು 30 ನಿಮಿಷಗಳಲ್ಲಿ ವಿಮಾನ ನಿಲ್ದಾಣದಿಂದ ಬಿಡುಗಡೆ. ಆದೇ ಖುಷಿಯಲ್ಲಿ ಹೊರಬಂದು ಎಲ್ಲರಿಗೂ ಕ್ಷೇಮ ಸಂದೇಶ ರವಾನಿಸಿದ್ದಾಯಿತು. ಕರೊನಾ ಎಂದು ಅತಿ ಭಯ ಬೀಳದಿರಿ, ಆದರೆ, ಎಚ್ಚರಿಕೆಯಿಂದಿರಿ, ಸ್ವಚ್ಛತೆ ಗರಿಷ್ಠ ಆದ್ಯತೆ ಇರಲಿ. ಸಾಮಾಜಿಕ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಜಿದ್ದಿಗೆ ಬಿದ್ದಂತೆ ಬಿತ್ತರಿಸುತ್ತಿರುವ, ಆಘಾತಕಾರಿ ಸುದ್ದಿಗಳಗೆ ಸೊಪ್ಪು ಹಾಕಬೇಡಿ. ಕರೊನಾ ಬಂದಿದೆ, ತಂತಾನೆ ಹೋಗುತ್ತದೆ, ಮತ್ತೆ ಇಡಿ ಪ್ರಪಂಚ ಬದುಕಲು ಸಹ್ಯವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net