

| ಶರಣಪ್ಪ ಕೃಷ್ಣಾಪುರ ಸಿದ್ದಾಪುರ (ಕೊಪ್ಪಳ)
ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನೇ (ಒಪಿಎಸ್) ಮರು ಜಾರಿ ಮಾಡಬೇಕೆಂಬ ಸರ್ಕಾರಿ ನೌಕರರ ಬೇಡಿಕೆ 6 ವರ್ಷ ಕಳೆದರೂ ಈಡೇರಿಲ್ಲ. ರಾಜ್ಯ ಸರ್ಕಾರಿ ನೌಕರರು ಬೇಡಿಕೆ ಮುಂದಿಟ್ಟು ಒತ್ತಡ ಹೇರಿದಾಗೆಲ್ಲ ಸಮಿತಿ ರಚಿಸಿ ಕೈತೊಳೆದುಕೊಳ್ಳುವ ಸರ್ಕಾರಗಳ ನಡೆ ಒಪಿಎಸ್ ನಿರೀಕ್ಷೆಯಲ್ಲಿರುವ 2.5 ಲಕ್ಷ ಸಿಬ್ಬಂದಿಯನ್ನು ಬೇಸರಕ್ಕೆ ದೂಡಿದೆ. 2006ರ ಏ.4ರ ಮುಂಚೆ ಸರ್ಕಾರಿ ನೌಕರಿಗೆ ಸೇರಿದವರಿಗೆ ಹಳೆಯ ಪಿಂಚಣಿ ಯೋಜನೆ ಅನ್ವಯವಾಗುತ್ತದೆ. ಅದರ ನಂತರದ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಹಲವು ರಾಜ್ಯಗಳು ರಾಷ್ಟ್ರೀಯ ಪಿಂಚಣಿ ಯೋಜನೆ ಬದಲಾಗಿ ಈ ಹಿಂದೆ ಜಾರಿಯಲ್ಲಿದ್ದ ಹಳೆಯ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಿವೆ. ಹೀಗಾಗಿ ರಾಜ್ಯದಲ್ಲೂ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬರುತ್ತಿದ್ದರೂ ಪ್ರಯೋಜವಾಗಿಲ್ಲ. ನೌಕರರ ಬೇಡಿಕೆ ಈಡೇರಿಕೆ ಸಾಧ್ಯತೆ ಪರಿಶೀಲಿಸಲು ಸರ್ಕಾರಗಳು ಪದೇಪದೆ ಸಮಿತಿಗಳ ರಚನೆ ಮಾಡುತ್ತಿವೆ. ಇದಕ್ಕೆ ಕೊನೆ ಯಾವಾಗಎನ್ನುವ ಪ್ರಶ್ನೆ ನೂತನ ಪಿಂಚಣಿ ಯೋಜನೆಗೆ ಒಳಪಟ್ಟಿರುವ (ಎನ್ಪಿಎಸ್) ಸರ್ಕಾರಿ ನೌಕರರನ್ನು ಕಾಡುತ್ತಿದೆ. 2018ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಆಡಳಿತ ಸುಧಾರಣೆ) ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು.
ಬಳಿಕ 2021ರ ಆ. 3ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ನೂತನ ಪಿಂಚಣಿ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿ (ಆರ್ಥಿಕ ಇಲಾಖೆ) ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಿದ್ದರು. ಇದೀಗ ಸಿದ್ದರಾಮಯ್ಯ ಸರ್ಕಾರವೂ ಮೊನ್ನೆ ಆ.16 ರಂದು ಹೊಸ ಸಮಿತಿ ರಚನೆ ಮಾಡಿ ಆದೇಶಿಸಿದೆ. ಆದರೆ ಈ ಸಮಿತಿಗಳು ನೌಕರರನ್ನು ಸಮಾಧಾನಪಡಿಸಲು ಸೀಮಿತವಾಗಿದೆಯೇ ಹೊರತು ಬೇಡಿಕೆಯನ್ನು ರ್ತಾಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಕ್ಕಲ್ಲ ಎಂಬುದು ನೌಕರರ ಅಸಮಾಧಾನ.
ವರದಿ ಏನಾಯ್ತು?: ಈ ಹಿಂದೆ ಎಚ್ಡಿಕೆ ಮತ್ತು ಬೊಮ್ಮಾಯಿ ಸಿಎಂ ಆಗಿದ್ದಾಗ ರಚಿಸಲಾಗಿದ್ದ ಸಮಿತಿಗಳು ಯಾವೆಲ್ಲ ಅಂಶ ಇಟ್ಟುಕೊಂಡು ಎಷ್ಟು ಪ್ರಗತಿ ಪರಿಶೀಲನೆ ಸಭೆ ನಡೆಸಿವೆ? ಸರ್ಕಾರಕ್ಕೆ ಏನು ವರದಿ ಕೊಟ್ಟಿವೆ ಎನ್ನುವುದು ಈವರೆಗೆ ತಿಳಿದಿಲ್ಲ.
ಒಪಿಎಸ್ ಜಾರಿ ಸಂಬಂಧ ರಚಿಸಿರುವ ಸಮಿತಿ 2 ತಿಂಗಳಲ್ಲಿ ಬೇರೆ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ಸಂಪುಟದಲ್ಲಿ ವರದಿ ಮಂಡನೆ ಬಳಿಕ ಒಪಿಎಸ್ ಜಾರಿಗೆ ಬರಲಿದೆ. ಈ ಕುರಿತು ಸಿಎಂ ಭರವಸೆ ನೀಡಿದ್ದಾರೆ. | ಸಿ.ಎಸ್.ಷಡಾಕ್ಷರಿ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ