

ಚಿಕ್ಕಮಗಳೂರು: ಪ್ರತಿಯೊಂದು ಇಲಾಖೆಗಳೂ ಜನಸ್ನೇಹಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಲೋಕಸ್ಪಂದನ ವ್ಯವಸ್ಥೆ ಜಾರಿ ಮಾಡಿ ಜನಸ್ನೇಹಿಯಾಗಿದೆ. ಇದೇ ಮಾದರಿ ಎಲ್ಲ ಇಲಾಖೆಗಳಲ್ಲಿಯೂ ಜಾರಿಯಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಲೋಕಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಬದಲಾವಣೆಯಾದ ಬಳಿಕ ರಾಜ್ಯದ ಆಡಳಿತದಲ್ಲಿಯೂ ಬದಲಾವಣೆಯಾಗಿದೆ. ಜನಸ್ನೇಹಿ ವ್ಯವಸ್ಥೆಗೆ ಸರ್ಕಾರ ಒತ್ತು ನೀಡಿದೆ ಎಂದು ಹೇಳಿದರು.
ಲೋಕಸ್ಪಂದನ ವ್ಯವಸ್ಥೆಯ ಉದ್ದೇಶ ಪೊಲೀಸ್ ಠಾಣೆಗೆ ಬರುವ ಜನ ಆತಂಕಗೊಳದೆ ನಿರಾಂತಕವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆಯಾಗಿದೆ. ಜನರಿಗೆ ಅಧಿಕಾರಿಗಳು ಹೇಗೆ ಸ್ಪಂದನೆ ಮಾಡಿದರು ಎಂಬ ಆಧಾರದ ಮೇಲೆ ಆ ಠಾಣೆಗೆ ಅಂಕಗಳನ್ನು ನೀಡಲಾಗುತ್ತದೆ. ಉತ್ತಮ ಅಂಕ ಪಡೆದ ಠಾಣೆಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ನೊಂದವರು ಪೊಲೀಸ್ ಠಾಣೆಗೆ ಬರುತ್ತಾರೆ. ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಪೊಲೀಸರು ಮಾಡಬೇಕು. ಪೊಲೀಸರಿಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ನೀಡಲು ಸರ್ಕಾರ ಸಿದ್ಧವಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಗೆ ವಸತಿ ಗೃಹಗಳ ಕೊರತೆಯಿದ್ದು ಎಸ್‌ಪಿ ಜತೆ ಚರ್ಚಿಸಿ ವಸತಿ ಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಸಿಪಿಐ ಶಿವಕುಮಾರ್ ಮಾತನಾಡಿ, ಪೊಲೀಸ್ ಇಲಾಖೆ ಇಂದು ಜನಸ್ನೇಹಿಯಾಗಿದೆ. ಯಾರೇ ಠಾಣೆಗೆ ಬಂದರೂ ಅವರನ್ನು ಸರಿಯಾಗಿ ಸತ್ಕರಿಸಿ ಅವರ ಸಮಸ್ಯೆಗೆ ಪರಿಹಾರವನ್ನು ದೊರಕಿಸಿಕೊಡುವತ್ತ ಎಲ್ಲರೂ ಕಾರ್ಯ ಮಗ್ನರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರಾಜಮ್ಮ, ಮುಖಂಡರಾದ ಕಲ್ಮರುಡಪ್ಪ, ತ್ರಿಭುವನ್, ಮಂಜುನಾಥ್, ಎನ್.ಡಿ.ಚಂದ್ರಪ್ಪ ಮತ್ತಿತರರಿದ್ದರು.