

ಬೆಂಗಳೂರು:
ಕಾಂಗ್ರೆಸ್ ಪಕ್ಷದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಮತ್ತೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿ ಮಾಡಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಡಿಯಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ನೀಡಬೇಕು ಎನ್ನುವುದು ಬೇಡಿಕೆ ಹಿಂದಿರುವ ಒತ್ತಾಯ.
ಮುಖ್ಯಮಂತ್ರಿ ಸ್ಥಾನದಲ್ಲಿ ಕುರುಬ ಸಮುದಾಯದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಈಗಾಗಲೆ ಹುದ್ದೆ ಅಲಂಕರಿಸಿರುವುದರಿಂದ ಆ ಎರಡು ಸಮುದಾಯಗಳಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಅಗತ್ಯವಿಲ್ಲ. ಲಿಂಗಾಯಿತರು, ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರನ್ನು ಈ ಹುದ್ದೆಗೆ ಆಯ್ಕೆ ಮಾಡಬೇಕು ಎನ್ನುವ ಸಂಗತಿ ಕೈ ಪಕ್ಷದಲ್ಲಿಮುನ್ನೆಲೆಗೆ ಬರುತ್ತಲೇ ಇದೆ.
ಪರಿಶಿಷ್ಟ ಜಾತಿ ಕೋಟಾದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪರಮೇಶ್ವರ್ ಅವರು ಡಿಸಿಎಂ ಹುದ್ದೆ ಅಲಂಕರಿಸಿದ್ದರು.
ಇನ್ನು ಪರಿಶಿಷ್ಟ ಪಂಗಡ ಕೋಟಾದಲ್ಲಿ ಸತೀಶ್ ಜಾರಕಿಹೊಳಿ ಆ ಹುದ್ದೆ ಅಲಂಕರಿಸಲು ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರು ಆಗಿಂದಾಗ್ಗೆ ಡಿಸಿಎಂ ಹುದ್ದೆಯ ಕನಸಿನ ಬೀಜ ಬಿತ್ತುತ್ತಿದ್ದಾರೆ.
ಲಿಂಗಾಯಿತ ಸಮುದಾಯದಲ್ಲಿ ಎಂ.ಬಿ.ಪಾಟೀಲ್ ಅವರು ಡಿಸಿಎಂ ಹುದ್ದೆಯ ಕನಸಿನ ಬೆನ್ನೇರಿ ಹೊರಟಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ದುಡಿದಿರುವ ಅವರು, ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ರಚನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದವರು.
ಅಲ್ಪಸಂಖ್ಯಾತರೊಬ್ಬರನ್ನು ಡಿಸಿಎಂ ಮಾಡಬೇಕು ಎನ್ನುವ ಬೇಡಿಕೆ ಬಹಳ ಹಿಂದಿನದು. ಚುನಾವಣೆ ಸಂದರ್ಭದಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಜಮೀರ್ ಅಹಮದ್ ಖಾನ್ ಅವರಿಗೆ ಈ ಹುದ್ದೆಯನ್ನು ನೀಡಬೇಕು ಎನ್ನುವುದು ಆ ಸಮುದಾಯದಲ್ಲಿ ಕೇಳಿಬರುತ್ತಿರುವ ಮಾತು.
ಒಂದಿಲ್ಲೊಂದು ನೆಪದಲ್ಲಿ ಡಿಸಿಎಂ ಹುದ್ದೆಯ ಕನಸಿನ ಬೀಜ ಬಿತ್ತನೆ ಮಾಡುತ್ತಿದ್ದರೂ, ಅದಕ್ಕೆ ಹೈಕಮಾಂಡ್ ಈತನಕ ಸೊಪ್ಪು ಹಾಕಿಲ್ಲ.
ಸರ್ಕಾರ ರಚನೆಯಾದ ಸಂದರ್ಭದಲ್ಲಿಯೇ ಸಚಿವ ರಾಜಣ್ಣ ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದರು. ಬಳಿಕ ಅದಕ್ಕೆ ಸಾಥ್ ನೀಡಿದ್ದ ಸತೀಶ್ ಜಾರಕಿಹೊಳಿ ಡಿಸಿಎಂ ಹುದ್ದೆ ಸೃಷ್ಟಿಯಾಗಲಿ ಎಂದಿದ್ದರು. ಇದಕ್ಕೆ ಧ್ವನಿಗೂಡಿಸಿದ ಕೈ ಪಕ್ಷದ ಮುಖಂಡರು ಡಿಸಿಎಂ ಹುದ್ದೆ ಸೃಷ್ಟಿ ಮಾಡಿ ಸಾಮಾಜಿಕ ಪರಿಕಲ್ಪನೆಯಲ್ಲಿ ಹಂಚಿಕೆ ಮಾಡಲಿ ಎಂದು ಬ್ಯಾಟಿಂಗ್ ಮಾಡಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆಯ ಚರ್ಚೆಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿತ್ತು. ಚುನಾವಣೆ ಮುಗಿದ ಬೆನ್ನಲ್ಲಿಯೇ ಮತ್ತೆ ಡಿಸಿಎಂ ಹುದ್ದೆಯ ಬೇಡಿಕೆ ಚರ್ಚೆಗೆ ಬಂದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಪವರ್‌ಗೆ ಬ್ರೇಕ್ ಹಾಕಬೇಕು ಎನ್ನುವ ಕಾರಣಕ್ಕಾಗಿ ಡಿಸಿಎಂ ಹುದ್ದೆಯ ವಿಷಯವನ್ನು ಮುಖ್ಯಮಂತ್ರಿಗಳ ಆಪ್ತ ಬಳಗ ಪ್ರಸ್ತಾಪಿಸಿ ಚರ್ಚೆಗೆ ತೇಲಿ ಬಿಡುತ್ತಿದೆ ಎನ್ನುವ ಮಾತುಗಳು ಪಕ್ಷದೊಳಗೇ ಕೇಳಿಬರುತ್ತಿವೆ.
ಲೋಕಸಭೆ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆಯ ಬೇಡಿಕೆ ವಿಷಯ ಪ್ರಸ್ತಾಪವಾದಾಗಲೆಲ್ಲ, ಡಿಕೆ ಶಿವಕುಮಾರ್ ಅವರಿಗೂ ಇರಸು ಮುರುಸು ಉಂಟು ಮಾಡುತ್ತಿದೆ. ಆ ಕಾರಣಕ್ಕಾಗಿಯೇ ಈ ವಿಷಯ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಇದಕ್ಕೆ ಯಾವ ರೀತಿ ಮದ್ದು ಹರಿಯುವುದು ಎನ್ನುವ ಲೆಕ್ಕಾಚಾರದಲ್ಲಿ ಹೆಜ್ಜೆ ಇಟ್ಟಿರುವ ಹೈಕಮಾಂಡ್, ಸದ್ಯಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವ ತನಕವೂ ಈ ಬಗ್ಗೆ ಯಾರು ಪ್ರತಿಕ್ರಿಯಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡುವ ಸಾದ್ಯತೆ ಇದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.
*ಹೆಚ್ಚುವರಿ ಡಿಸಿಎಂ ಮಾಡಿದರೆ ತಪ್ಪಿಲ್ಲ ಎಂದು ಸಚಿವರಾಜದ ಕೆ.ಎನ್.ರಾಜಣ್ಣ, ಜಮೀರ್ ಅಹ್ಮದ್ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನನ್ನ ಅಭಿಪ್ರಾಯ ಕೇಳಿ ಡಿಸಿಎಂ ಮಾಡುವುದಿಲ್ಲ. ಇದೆಲ್ಲ ಹೈಕಮಾಂಡ್‌ಗೆ ಬಿಟ್ಟಿದ್ದು.
-ಜಿ.ಪರಮೇಶ್ವರ, ಗೃಹ ಸಚಿವರು