

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿದ್ದು, ಇಂದು ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಒಟ್ಟು 8,360 ಅಭ್ಯರ್ಥಿಗಳ ಭವಿಷ್ಯ ಇಂದೇ ನಿರ್ಧಾರವಾಗಲಿದ್ದು, ಕೇಂದ್ರದಲ್ಲಿ ಯಾರಿಗೆ ಅಧಿಕಾರದ ಪಟ್ಟ ಸಿಗಲಿದೆ ಎಂಬುದೇ ಸದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಒಂದೆಡೆ ಈಗಾಗಲೇ ಹೊರಬಂದಿರುವ ಎಕ್ಸಿಟ್ ಪೋಲ್ ವರದಿಗಳಿಂದ ಭಾರೀ ಸಡಗರದಲ್ಲಿರುವ ಬಿಜೆಪಿ ನಾಯಕರು, ದೇಶವ್ಯಾಪಿ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಮತ್ತೊಂದೆಡೆ ಇಂಡಿಯಾ ಮೈತ್ರಿಕೂಟ ಗೆಲುವು ನಮ್ಮ ಕಡೆಯೇ ಇದೆ ಎಂದು ವಿಶ್ವಾಸ್ ವ್ಯಕ್ತಪಡಿಸಿದ್ದು, ಘೋಷಣೆವರೆಗೂ ಕಾದು ನೋಡಿ ಎಂದಿದ್ದಾರೆ. ಒಟ್ಟಾರೆ ಅಂತಿಮವಾಗಿ ಗೆಲುವು ಯಾರಿಗೆ ಎಂಬುದು ಇಂದು ಮಧ್ಯಾಹ್ನದೊಳಗೆ ತಿಳಿಯಲಿದೆ.
ಮೂರು ಸಮೀಕ್ಷೆಗಳ ಪ್ರಕಾರ, ಎನ್ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದ್ದು, ಇದೇ ಬಿಜೆಪಿಗೆ ಪ್ಲಸ್ ಆಗಿದೆ. ಕೇವಲ ಭಾರತ ಮಾತ್ರವಲ್ಲದೇ ಇತರೆ ದೇಶಗಳು ಸಹ ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಬಹಳ ಕಾತರದಿಂದ ಎದುರುನೋಡುತ್ತಿವೆ. ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ವರವಾಗಲಿದ್ಯಾ? ಅಥವಾ ಲೆಕ್ಕಾಚಾರಗಳು ಬದಲಾಗಿ ಇಂಡಿಯಾ ಮೈತ್ರಿಕೂಟದ ವಿಶ್ವಾಸದಂತೆ ಆಗಲಿದ್ಯಾ? ಎಂಬುದನ್ನು ಸದ್ಯ ಕುತೂಹಲದಿಂದ ನಿರೀಕ್ಷಿಸಬೇಕಿದೆ.