ನಿರ್ಭೀತಿಯಿಂದ ದೂರು ಕೊಡಿ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿಕೆ

BS Patil
Published on

| ಮಂಜುನಾಥ ಕೆ. ಬೆಂಗಳೂರು

ಭ್ರಷ್ಟಾಚಾರ ಸಮಾಜದ ಶತ್ರು. ಶತ್ರುವಿಗೆ ಯಾವುದೇ ಕಾರಣಕ್ಕೂ ತಲೆಬಾಗಬಾರದು. ಈ ಶತ್ರು ರಾಕ್ಷಸ ರೂಪ ಪಡೆದು ಎಲ್ಲರನ್ನು ತಿಂದು ಹಾಕುತ್ತದೆ. ವ್ಯವಸ್ಥೆ ಹೀಗಾಗಿದೆ ಎಂದು ದೂರುತ್ತಾ ಕೂರದೆ. ಇದರ ವಿರುದ್ಧ ಪ್ರತಿಯೊಬ್ಬರು ಎದ್ದು ನಿಂತು ಹೋರಾಡಬೇಕು. ಲಂಚಕ್ಕೆ ಬೇಡಿಕೆ ಇಡುವವರು ಯಾರೇ ಆಗಿದ್ದರೂ ದೂರು ಕೊಡಿ. ಖಂಡಿತಾ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ನೇರ ಮಾತುಗಳಿವು. ಹೈಕೋರ್ಟ್ ಆದೇಶದಿಂದ ಮರುಸ್ಥಾಪನೆಗೊಂಡು ಕಾರ್ಯಾರಂಭಿಸಿರುವ ಲೋಕಾಯುಕ್ತದಿಂದ ಭ್ರಷ್ಟರ ಮಟ್ಟಹಾಕಲು ಏನೆಲ್ಲ ಸಿದ್ಧತೆಯಾಗಿದೆ? ಸರ್ಕಾರದಿಂದ ಏನೆಲ್ಲ ಸಹಕಾರ ಬೇಕಿದೆ? ಲೋಕಾಯುಕ್ತ ಪೊಲೀಸ್ ಘಟಕದ ಕಾರ್ಯನಿರ್ವಹಣೆ ಹೇಗಿರಲಿದೆ? ಎಂಬುದರ ಕುರಿತ ಸಮಗ್ರ ಮಾಹಿತಿಯನ್ನು ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಂಚಿಕೊಂಡಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಭ್ರಷ್ಟಾಚಾರ ನಿಮೂಲನೆ ವಿಚಾರದಲ್ಲಿ ಸಾರ್ವಜನಿಕರ ಪಾತ್ರ ಏನು?

ಭ್ರಷ್ಟಾಚಾರ ಕೇವಲ ಅಧಿಕಾರಿ ಗಳಿಂದ ಮಾತ್ರ ಆಗುವುದಿಲ್ಲ. ಅದಕ್ಕೆ ಸಹಕರಿಸುವ ಸಾರ್ವಜನಿಕ ರಿಂದಲೂ ಆಗುತ್ತದೆ. ಹೇಗಾದರೂ ಸರಿ ನಮ್ಮ ಕೆಲಸವಾದರೆ ಸಾಕು ಎಂದು ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು. ಹಣಕ್ಕೆ ಬೇಡಿಕೆ ಇಡುವ ಅಧಿಕಾರಿಗಳು ಕಂಡು ಬಂದರೆ ಧೈರ್ಯವಾಗಿ ಬಂದು ಲೋಕಾಯುಕ್ತಕ್ಕೆ ದೂರು ನೀಡಬೇಕು ಅವರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ.

  • ಮೊದಲಿನಂತೆ ಲೋಕಾ ಬಲಗೊಳ್ಳುತ್ತದೆಯೇ?

100ಕ್ಕೆ 100 ಲೋಕಾಯುಕ್ತ ಮತ್ತೆ ಬಲಯುತ ಆಗುತ್ತದೆ. ಇದರಲ್ಲಿ ಸಂದೇಹ ಬೇಡ. ಲೋಕಾಯುಕ್ತಕ್ಕೆ ಮೊದಲಿದ್ದ ಕಳೆ ಬರುತ್ತದೆ. ಲೋಕಾಯುಕ್ತಕ್ಕೆ ಮೊದಲಿನಂತೆ ಶಕ್ತಿ ನೀಡಲಾಗಿದೆ. ಕೈಕಟ್ಟಿ ಕೂರದೆ ಇರುವುದನ್ನೇ ಉಪಯೋಗಿಸಿ ಕೆಲಸ ಮಾಡಿ ತೋರಿಸಲಾಗುತ್ತದೆ.

  • ಅಗತ್ಯ ಅಧಿಕಾರಿ, ಸಿಬ್ಬಂದಿ ಮಂಜೂರಾಗಿದೆಯೇ?

ಅಗತ್ಯವಿರುವ ಸಿಬ್ಬಂದಿಯನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಎಸಿಬಿಯಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇದೆ. ಅವುಗಳನ್ನು ಹೈಕೋರ್ಟ್ ಆದೇಶದ ಪ್ರಕಾರ ಲೋಕಾಯುಕ್ತಕ್ಕೆ ಕಡತಗಳ ವರ್ಗಾವಣೆ ಆಗುತ್ತಿವೆ. ಎಸಿಬಿಯಲ್ಲಿದ್ದ 141 ಕಾನ್​ಸ್ಟೆಬಲ್ ಮತ್ತು ಹೆಡ್ ಕಾನ್​ಸ್ಟೆಬಲ್​ಗಳ ವರ್ಗಾವಣೆಯಾಗಿದೆ.

  • ಶಕ್ತಿಯುತವಾಗಿ ಕಾರ್ಯನಿರ್ವಹಿಸಲು ತುರ್ತು ಏನೆಲ್ಲ ಬೇಕಾಗಿದೆ?

ಕೇವಲ ಕಡತ ಮತ್ತು ಕಾನ್ಸ್​ಟೇಬಲ್ ಮತ್ತು ಹೆಡ್ ಕಾನ್ಸ್​ಟೇಬಲ್​ಗಳು ಬಂದರೆ ತನಿಖೆ ನಡೆಸಲು ಆಗುವುದಿಲ್ಲ. ತನಿಖೆಯನ್ನು ಪರಿಣಾಮಕಾರಿಯಾಗಿ ಮಾಡಬೇಕಾದರೆ ತನಿಖಾಧಿಕಾರಿಗಳು ಬೇಕು. ಇನ್ಸ್​ಪೆಕ್ಟರ್, ಡಿವೈಎಸ್​ಪಿಗಳು ಮತ್ತು ಎಸ್​ಪಿಗಳು ಬೇಕಾಗುತ್ತದೆ. ಕಂಪ್ಯೂಟರ್, ಡಿಜಿಟಲ್ ಡಿವೈಸ್, ಎಲೆಕ್ಟ್ರಾನಿಕ್ ಉಪಕರಣಗಳು, ಬುಕ್ಸ್, ರಿಜಿಸ್ಟರ್ಸ್, ವಾಹನಗಳು ಸೇರಿ ಹಲವು ಸೌಲಭ್ಯಗಳು ಬೇಕಾಗುತ್ತದೆ. ಇದನ್ನು ಕೊಡುವ ತಯಾರಿ ರಾಜ್ಯ ಸರ್ಕಾರ ಮಾಡಬೇಕಾಗುತ್ತದೆ.

  • ಲೋಕಾಯುಕ್ತ ಪೊಲೀಸ್ ಘಟಕದ ಕಾರ್ಯನಿರ್ವಹಣೆ ಹೇಗಿರಲಿದೆ?

ದಾಳಿ ನಡೆಸಬೇಕು. ತನಿಖೆ ನಡೆಸಬೇಕು. ವಿಚಾರಣೆ ನಡೆಸಬೇಕು. ಶಿಫಾರಸ್ಸು ಮಾಡಬೇಕು. ಲೋಕಾಯುಕ್ತದಲ್ಲಿರುವ ಪೊಲೀಸರಿಗೆ ನಗರ ಮತ್ತು ಜಿಲ್ಲಾ ಮಟ್ಟದಲ್ಲಿರುವ ಹಲವಾರು ಕೆಲಸಗಳನ್ನು ವಹಿಸಿದ್ದೇವೆ. ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗವು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ 26 ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ನೀಡಲಾಗಿದೆ. ಸರ್ಕಾರ ಶಿಫಾರಸ್ಸು ಮಾಡಿರುವ ನರೇಗಾ ಸೇರಿ ಸಾವಿರಾರು ಪ್ರಕರಣಗಳು ತನಿಖಾ ಹಂತದಲ್ಲಿವೆ. ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕಿದೆ.

  • ಎಸಿಬಿಯಲ್ಲಿ ಜನಪ್ರತಿನಿಧಿಗಳ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆ ಹೇಗೆ?

ಎಸಿಬಿಯಲ್ಲಿ ದಾಖಲಾದ ಕೆಲವೊಂದು ಪ್ರಕರಣಗಳು ಹೈಕೋರ್ಟ್​ನಲ್ಲೇ ಇತ್ಯರ್ಥವಾಗಬೇಕಿದೆ. ಯಾವ ಯಾವ ಕೇಸ್​ಗಳಿಗೆ ಅನ್ವಯಿಸುತ್ತೆ ಎಂಬುದನ್ನು ಪರಿಶೀಲಿಸಿ ಲೋಕಾಯುಕ್ತ ತನಿಖೆ ಮುಂದುವರಿಸಲಾಗುತ್ತದೆ. ತನಿಖೆಯಲ್ಲಿ ಒಂದು ವೇಳೆ ಲೋಪವಾಗಿದ್ದರೆ ಅಂತಹ ಪ್ರಕರಣಗಳನ್ನು ಪುನಃ ಕೈಗೆತ್ತಿಕೊಂಡು ತನಿಖೆ ನಡೆಸಲಾಗುತ್ತದೆ.

  • ತನಿಖೆ ವಿಚಾರವಾಗಿ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆಯೇ?

ಆರು ತಿಂಗಳ ಒಳಗಾಗಿ ತನಿಖೆ ನಡೆಸಬೇಕು. ಸಾಧ್ಯವಾಗದಿದ್ದರೆ ಮತ್ತೆ 6 ತಿಂಗಳು ಸಮಯ ತೆಗೆದುಕೊಂಡು ಒಟ್ಟಾರೆ ವರ್ಷದೊಳಗೆ ಪ್ರಕರಣ ಇತ್ಯರ್ಥ ಪಡಿಸಬೇಕಾಗಿದೆ. ತನಿಖೆ ನಡೆಸಿ ಕೋರ್ಟ್​ಗೆ

ಚಾರ್ಜ್​ಶೀಟ್ ಸಲ್ಲಿಸಿದಾಗ ಕೋರ್ಟ್ ಸಮಯ ತೆಗೆದುಕೊಳ್ಳುತ್ತದೆ. ಸೂಕ್ತ ಸಾಕ್ಷಿಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಇದನ್ನು ಕಾಲಮಿತಿಯಲ್ಲಿ ಮಾಡಿದಾಗ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ. ಇಲ್ಲವಾದರೆ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.

  • ಸರ್ಕಾರದಿಂದ ಏನೆಲ್ಲ ಸಹಕಾರ ಬಯಸುತ್ತೀರಾ?

ಸರ್ಕಾರ ಅಗತ್ಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳನ್ನು ಹಾಗೂ ಸ್ಥಳವನ್ನು ಒದಗಿಸಿಕೊಡಬೇಕು. ಎಸಿಬಿ ಕಚೇರಿ ಹಾಗೂ ಎಸಿಬಿ ಠಾಣೆಗಳನ್ನು ಲೋಕಾಯುಕ್ತಕ್ಕೆ ಶೀಘ್ರವೇ ಹಸ್ತಾಂತರಿಸಿದರೆ ಮತ್ತಷ್ಟು ವೇಗವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ.

  • ಹಿಂದಿನ ಅಧಿಕಾರ ಮತ್ತೆ ದೊರೆಯಲು ಲೋಕಾಯುಕ್ತಕ್ಕೆ ತಿದ್ದುಪಡಿ ಅಗತ್ಯವಿದೆಯೇ?

ಲೋಕಾಯುಕ್ತ ಬಲಪಡಿಸುವ ನಿಟ್ಟಿನಲ್ಲಿ ಹಲವಾರು ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೆ ಹೈಕೋರ್ಟ್ ಕೂಡ ಲೋಕಾಯುಕ್ತ ಕಳುಹಿಸಿದ ಶಿಫಾರಸ್ಸು ಒಪ್ಪಬೇಕು. ಸೆಕ್ಷನ್ 13ರಡಿಯಲ್ಲಿ ಲೋಕಾಯುಕ್ತಕ್ಕೆ ತನ್ನದೇ ಆದ ಪವರ್ ಇದೆ. ತನಿಖೆ ಮಾಡುವಾಗ ಯಾವುದೇ ಒಬ್ಬ ವ್ಯಕ್ತಿ ಕ್ರಿಮಿನಲ್ ಅಪರಾಧ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಲ್ಲಿ ಲೋಕಾಯುಕ್ತರು ಆ ವ್ಯಕ್ತಿಯನ್ನು ಅಮಾನತು ಮಾಡಲು ಶಿಫಾರಸ್ಸು ಮಾಡಬಹುದಾಗಿದೆ. ಇದನ್ನು ಸರ್ಕಾರ ಸ್ವೀಕಾರ ಮಾಡಬೇಕಿದೆ. ಇದಕ್ಕೆ 2010ರಲ್ಲಿ ತಿದ್ದುಪಡಿ ತರಲಾಗಿದೆ. ಆ ಪ್ರಕಾರ ಸರ್ಕಾರ ಒಪ್ಪಿದರೆ ಮಾತ್ರ ಇದನ್ನು ಮಾಡಬಹುದು ಇಲ್ಲವಾದರೆ ಇಲ್ಲ. ಇದರ ಅರ್ಥ ಸರ್ಕಾರ ಪುನರ್ ವಿಮರ್ಶೆ ಮಾಡಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net